ಕಲಬುರಗಿ: ರಾಜ್ಯದಲ್ಲಿ ಶೀತ ಗಾಳಿ ವಾತಾವರಣ ಮುಂದುವರಿದಿದ್ದು, ನೆಗಡಿ, ಕೆಮ್ಮು, ಜ್ವರದಿಂದ ಜನ ಭಯ ಭೀತರಾಗದೆ ಬದುಕಬೇಕು ಎಂದು ಮಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ್ ಅಹ್ಮದ್ ಮಣೂರ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಡೆಲ್ಟಾ ವೈರಸ್‌ನಂತ ಓಮೊಕ್ರೊನಾನಿಂದ ಸರಾಸರಿ ಸಾವಿನ ಪ್ರಮಾಣ ಕಡಿಮೆ ಇದೆ. ಹೀಗಾಗಿ, ಸಾರ್ವಜನಿಕರು ಆತಂಕ ಪಡದೆ ಮುಂಜಾಗ್ರತೆವಹಿಸಬೇಕು. ಜ್ವರ ಕಮ್ಮಿಯಾಗದಿದ್ದರೆ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು. ಸದ್ಯ ಮೂರನೇ ಅಲೆ ಎದುರಾದರೂ ಪರಿಣಾಮ ಅಷ್ಟೊಂದಿಲ್ಲ. ಹೀಗಾಗಿ, ಶೇ. ೧೦ ರಷ್ಟು ಜನ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಇನ್ನು ಕೋವಿಡ್ ಲಸಿಕೆ ಪಡೆಯದಿರುವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಲು ಮುಂದಾಗಬೇಕು ಎಂದ ಅವರು, ಇನ್ನು ಯಾರು ಎರಡೂ ಲಸಿಕೆ ಪಡೆದು ೯ ತಿಂಗಳು ಪೂರೈಸಿರುವವರು ಕೂಡ ಮೂರನೇ ಡೋಸ್ (ಬೂಸ್ಟರ್) ಪಡೆದುಕೊಂಡು ಆರೋಗ್ಯ ಕಾಪಾಡಬೇಕು. ಈಗಾಗಲೇ ವಿದೇಶದಲ್ಲಿ ನಾಲ್ಕನೇ ಡೋಸ್ ತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ ಎಂದಿದ್ದಾರೆ.
ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡುವುದಲ್ಲದೆ, ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಆಗಾಗ ಕೈಗಳನ್ನು ಸ್ವಚ್ವವಾಗಿ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.