ಸ್ವಹಿತಕ್ಕೆ ಸಮಾಜ ಒಡಿಯಬೇಡಿ : ಮುರಗೇಶ ನಿರಾಣಿಗೆ ಪಂಚಮಸಾಲಿ ಶ್ರೀಗಳ ಎಚ್ಚರಿಕೆ

0
22

ಬೆಂಗಳೂರು: ‘ಸ್ವಂತ ಹಿತಕ್ಕೆ ಸಮಾಜ ಒಡೆಯಲು ಮುಂದಾದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರಿಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಹಿರಂಗವಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನೀವು ಶಾಸಕ, ಮಂತ್ರಿ ಅಥವಾ ಮುಖ್ಯಮಂತ್ರಿ ಆಗಬೇಕೆಂಬ ಕಾರಣಕ್ಕಾಗಿ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿಗೊಂದು ಪೀಠ ಮಾಡಿಕೊಳ್ಳಿ. ಅದಕ್ಕೆ ನಾವು ಬೇಡ ಎನ್ನುವುದಿಲ್ಲ. ಆದರೆ, ನಿಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ದುರ್ಬಳಕೆ ಮಾಡಿಕೊಂಡರೆ ಸರಿ ಇರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

‘ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಹೆಸರನ್ನು ಸೂಚಿಸಬೇಕೆಂದು ಎಂದು ನಿರಾಣಿ ಕೋರಿದ್ದರು. ಸಮುದಾಯದ ಮೂವರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಿ ಎಂದು ನಾವು ಹೇಳಿದ್ದೆವು. ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ಯಾವಾಗ ಕೈ ತಪ್ಪಿತೊ ಅಂದಿನಿಂದ ನಮ್ಮ ಮೇಲೆ ಮುನಿಸಿಕೊಂಡು ಮೂರನೇ ಪೀಠ ಸ್ಥಾಪಿಸುವ ಯತ್ನ ನಡೆಸಿದ್ದಾರೆ. ಇದಕ್ಕೆ ನಮ್ಮ ಬೆಂಬಲವೂ ಇದೆ ಎಂದು ಹೇಳಿಕೊಂಡಿದ್ದಾರೆ. ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡಲು ಮೂರನೇ ಪೀಠ ಸ್ಥಾಪನೆ ಆಯಿತೇ’ ಎಂದೂ ಅವರು ಪ್ರಶ್ನಿಸಿದರು.

‘ಪಂಚಮಸಾಲಿ ಸಮುದಾಯವನ್ನು ಒಗ್ಗೂಡಿಸಲು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ್ ಹೀಗೆ ಎಲ್ಲರೂ ಸೇರಿಕೊಂಡು ಹೋರಾಟ ಮಾಡಿದ್ದೇವೆ. ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕರೆ ಜಯಮೃತ್ಯುಂಜಯ ಸ್ವಾಮೀಜಿ, ಯತ್ನಾಳ ಮತ್ತು ಕಾಶಪ್ಪನವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಆತಂಕ ನಿರಾಣಿ ಅವರದ್ದಾಗಿದೆ. ಅದಕ್ಕಾಗಿ ಮೂರನೇ ಪೀಠ ಸ್ಥಾಪಿಸಲು ಮುಂದಾಗಿದ್ದಾರೆ. ನೀವು ಮೂರನೇ ಪೀಠ ಪ್ರಾರಂಭಿಸಿದರೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು.

‘ಸಮುದಾಯದ ಅನೇಕ ಹಿರಿಯರು ತ್ಯಾಗ, ಬಲಿದಾನ ಮಾಡಿ ಪಂಚಮಶಾಲಿ ಪೀಠವನ್ನು ಕಟ್ಟಿದ್ದಾರೆ. ಸಮುದಾಯದ ಒಗ್ಗಟ್ಟಿಗಾಗಿ ಅನೇಕರು ಶ್ರಮಿಸಿದ್ದಾರೆ. ಮೀಸಲಾತಿ ಹೋರಾಟಕ್ಕೆ ಎಲ್ಲ ಶಾಸಕರೂ ಬೆಂಬಲವಾಗಿ ನಿಂತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗೆ ನ್ಯಾಯ ಕೊಡುವ ಭರವಸೆ ಇದೆ’ ಎಂದು ಹೇಳಿದರು.

‘ನೀವು ಮುಖ್ಯಮಂತ್ರಿಯಾಗುವುದಕ್ಕೆ ನಮ್ಮ ತಕರಾರು ಇಲ್ಲ. ನಿಮ್ಮ ಹಣೆಬರಹದಲ್ಲಿ ಅದು ಬರೆದಿದ್ದರೆ ಆಗಿಯೇ ಆಗುತ್ತದೆ. ಅದನ್ನು ಯಾರಿಂದಲೂ ತಪ್ಪಿಸಲಾಗದು. ಸ್ವಂತ ಹಿತಾಸಕ್ತಿಯ ನಿಮ್ಮ ಚಟುವಟಿಕೆಗಳನ್ನು ಕೈಬಿಡಿ. ಎಲ್ಲರೂ ಕಷ್ಟಪಟ್ಟು ಒಗ್ಗೂಡಿಸಿರುವ ಸಮುದಾಯವನ್ನು ಒಡೆಯುವ ಕೆಲಸವನ್ನು ನಿಲ್ಲಿಸಿ’ ಎಂದು ಸ್ವಾಮೀಜಿ ಅವರು ಮನವಿ ಮಾಡಿದರು.

‘ಮುಖ್ಯಮಂತ್ರಿ ಆಗಲು ಹೊರಟಿರುವ ಮುರುಗೇಶ ನಿರಾಣಿ, ಆ ಉದ್ದೇಶಕ್ಕಾಗಿ ಅದಕ್ಕಾಗಿ ಮೂರನೇ ಪೀಠ ಸ್ಥಾಪಿಸುತ್ತಿದ್ದಾರೆ. ನೀವು ಮುಖ್ಯಮಂತ್ರಿ ಆಗುವುದು ಇರಲಿ, ಮೊದಲು ನಿಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಿ’ ಎಂದು ಅಖಿಲ ಭಾರತ ಪಂಚಮಶಾಲಿ ಮಹಾಸಭಾದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು.

‘ಸಂಪುಟದಿಂದ ಕೈ ಬಿಡಬಹುದೆಂಬ ಭಯದಿಂದಾಗಿ ಮೂರನೇ ಪೀಠ ಸ್ಥಾಪಿಸಲು ನಿರಾಣಿ ಹೊರಟಿದ್ದಾರೆ. ಸಚಿವರಾಗುವುದಕ್ಕಾಗಿ ಕೂಡಲಸಂಗಮ ಪೀಠ, ಹರಿಹರ ಪೀಠವನ್ನು ಬಳಸಿಕೊಂಡರು. ಎರಡೂ ಪೀಠಗಳು ಕೈಬಿಟ್ಟಿದ್ದರಿಂದ ಮೂರನೇ ಪೀಠ ರಚನೆಗೆ ಮುಂದಾಗಿದ್ದಾರೆ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸಮುದಾಯ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here