ಕೋವಿಡ್ ನಿಂದಾಗಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ

0
16

ಬೆಂಗಳೂರು: ಕೋವಿಡ್ ಮೂರನೇ ಅಲೆ ಆರಂಭವಾಗಿ ಬಹಳ ದಿನಗಳಾಗಿವೆ. ಮೊದಲ ಅಲೆಯ ಆರಂಭದಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿತ್ತು, ನಂತರ ಚೇತರಿಸಿಕೊಂಡು ಸಮರ್ಪಕವಾಗಿ ನಿಭಾಯಿಸಿತ್ತು. ಎರಡನೇ ಅಲೆಯಲ್ಲಿ ಗೊತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದವು. ಮೂರನೇ ಅಲೆ ಮಾರಣಾಂತಿಕವಲ್ಲವಾದರೂ ತಜ್ಞರ ಅಭಿಪ್ರಾಯದಂತೆ ವೇಗವಾಗಿ ಹರಡಿದೆ. ಮರಣ ಪ್ರಮಾಣ ಶೇ.0.04ನಷ್ಟಿದೆ. ಕೋವಿಡ್ ಸೋಂಕು ಹೆಚ್ಚಿದ್ದರೂ ಜ.21ಕ್ಕೆ 3,23,143 ಸಕ್ರಿಯ ಪ್ರಕರಣಗಳಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.

ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಕೇವಲ 2258 ಮಾತ್ರ. ಅದರಲ್ಲಿ ಸಾಮಾನ್ಯ ವಾರ್ಡ್ ನಲ್ಲಿ 1744, ಐಸಿಯುವಿನಲ್ಲಿ 203 ಹಾಗೂ ಐಸಿಯು ವೆಂಟಿಲೇಟರ್ ನಲ್ಲಿ 58 ಮಂದಿ ದಾಖಲಾಗಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ 2258 ಜನ ಎಂದರೆ ಇನ್ನು 3.21 ಲಕ್ಷ ಸಕ್ರಿಯ ಪ್ರಕರಣಗಳು ಆಸ್ಪತ್ರೆಯಿಂದ ಹೊರಗಿದ್ದಾರೆ. ಬೆಂಗಳೂರಿನಲ್ಲಿ 1,51,022 ಲಕ್ಷ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Contact Your\'s Advertisement; 9902492681

ಕೊರೋನಾ ಮೊದಲ ಅಲೆಯಲ್ಲಿ ಜನರಿಗೆ ಸರಿಯಾಗಿ ಸ್ಪಂದಿಸಲಿಲ್ಲ, ಬಡವರಿಗೆ ಆಹಾರ ಕಿಟ್ ನೀಡಲಿಲ್ಲ. ಎರಡನೇ ಅಲೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಹೆಚ್ಚಿನ ಸಾವು ಸಂಭವಿಸಿತ್ತು. ಅಧಿಕೃತವಾಗಿ ಇವರು ಐಸಿಎಂಆರ್ ಮಾರ್ಗಸೂಚಿ ಇಟ್ಟುಕೊಂಡು 37 ಸಾವಿರ ಸಾವು ಎಂದು ತೋರಿಸಿದರು. ವಾಸ್ತವದಲ್ಲಿ ಕೋವಿಡ್ ನಿಂದಾಗಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಐಸಿಎಂಆರ್ ಪ್ರಕಾರ ಸುಮಾರು 40 ರೀತಿಯ ವಿವಿಧ ಕಾಯಿಲೆ ಇರುವವರು ಕೋವಿಡ್ ಸೋಂಕಿನಿಂದ ಸತ್ತರೂ ಅದನ್ನು ಕೋವಿಡ್ ಸಾವು ಎಂದು ಪರಿಗಣಿಸುವುದಿಲ್ಲ. ಹೀಗಾಗಿ ಕೇವಲ 37 ಸಾವಿರ ಜನ ಮಾತ್ರ ಕೋವಿಡ್ ನಿಂದ ಸತ್ತಿದ್ದಾರೆ ಎಂದು ಅಂಕಿ ಅಂಶ ತೋರಿಸುತ್ತಿದ್ದಾರೆ.

2020ರ ಜನವರಿಯಿಂದ ಜುಲೈಗೂ, 2021ರ ಜನವರಿಯಿಂದ ಜುಲೈವರೆಗೂ ಸತ್ತಿರುವವರ ಪ್ರಮಾಣ ಹೋಲಿಕೆ ಮಾಡಿದರೆ, ಈ 7 ತಿಂಗಳಲ್ಲಿ 1,62,000 ಲಕ್ಷ ಜನ ಅಧಿಕವಾಗಿ ಸತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೋವಿಡ್ ಹೊರತಾಗಿ ಇತರೆ ಸಾಂಕ್ರಾಮಿಕ ರೋಗ, ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪ ಬರಲಿಲ್ಲ. ಆದರೂ 1,62,000 ಲಕ್ಷ ಜನ ಸತ್ತಿದ್ದಾರೆ.

ಕೇಂದ್ರದ ವಿತ್ತ ಮಂತ್ರಿಗಳು 20 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೋಜ್ ಘೋಷಿಸಿದರು. ಅದರಿಂದ ಯಾರಿಗೆ ಉಪಯೋಗವಾಯ್ತು? ಗೊತ್ತಿಲ್ಲ.  ಬೀದಿಬದಿ ವ್ಯಾಪಾರಿಗಳಿಗೆ 2 ಸಾವಿರ, ಅಸಂಘಟಿತ ಕಾರ್ಮಿಕರಿಗೆ 2 ಸಾವಿರ, ಆಟೋ ಟ್ಯಾಕ್ಸಿ ಚಾಲಕರಿಗೆ 3 ಸಾವಿರ, ಕಟ್ಟಡ ಕಾರ್ಮಿಕರಿಗೆ 3 ಸಾವಿರ ಪರಿಹಾರ ಘೋಷಿಸಿದರು. ಆದರೆ ಕೇವಲ ಶೇ.7ರಷ್ಟು ಜನರಿಗೆ ಮಾತ್ರ ಈ ಪರಿಹಾರ ತಲುಪಿದೆ. ಐಸಿಎಂಆರ್ ಪ್ರಕಾರ ಸತ್ತಿರುವ 37 ಸಾವಿರ ಜನರಲ್ಲಿ ಶೇ.5ರಷ್ಟು ಜನರಿಗೆ ಮಾತ್ರ ಪರಿಹಾರ ಎಂದರು.

ರಾಜ್ಯದಲ್ಲಿ ಈಗ ಹೋಮ್ ಐಸೋಲೇಶನ್ ನಲ್ಲಿ ಹೆಚ್ಚು ಸೋಂಕಿತರಿದ್ದು, 10 ದಿನಗಳಲ್ಲಿ ಕೇವಲ 2258 ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲು. ಇನ್ನು ಪರೀಕ್ಷೆ ಮಾಡಿಸಿದರೆ ಎರಡು ಮೂರು ದಿನಾವಾದರೂ ಫಲಿತಾಂಶ ನೀಡುವುದಿಲ್ಲ. ಅಷ್ಟು ದಿನಗಳಲ್ಲಿ ಅವರು ಬೇರೆಕಡೆಗಳಲ್ಲಿ ಸುತ್ತಾಡಿರುತ್ತಾರೆ. ಅವರಿಗೆ ಮೆಡಿಕಲ್ ಕಿಟ್ ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಹೊಂ ಐಸೋಲೇಷನ್ ನಲ್ಲಿರುವವರಿಗೆ ರಾಜ್ಯ ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಹೀಗಾಗಿ ಇವರಿಗೆ 2 ತಿಂಗಳಷ್ಟು ಆಹಾರ ಪದಾರ್ಥ ಉಚಿವಾಗಿ ನೀಡಿ. ಉಳಿದಂತೆ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹಾಗೂ ಚಾಲಕರಿಗೆ ಕಳೆದ ಬಾರಿ ಸರಿಯಾಗಿ ಪರಿಹಾರ ನೀಡಿಲ್ಲ, ಈ ಬಾರಿಯಾದರೂ ನೀಡಲಿ ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಮೂರನೇ ಅಲೆಯಲ್ಲಿ ಸರ್ಕಾರ ತಪ್ಪು ಲೆಕ್ಕ ತೋರಿಸುತ್ತಿದೆಯೇ ಎಂಬ ಪ್ರಶ್ನೆಗೆ, ‘ಇಲ್ಲ, ಈ ಬಾರಿ ಸಾವಿನ ಪ್ರಮಾಣ ಕಡಿಮೆ ಇದ್ದು, ಕೇವಲ ಶೇ.0.04 ನಷ್ಟು ಮಾತ್ರ ಇದೆ’ ಎಂದರು.

ಕೋವಿಡ್ ಪರಿಹಾರದ ಚೆಕ್ ಬೌನ್ಸ್ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿಗಳು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಚೆಕ್ ನೀಡುವಂತೆ ಹೇಳಿದ್ದರು. ಅದೇ ರೀತಿ ಚೆಕ್ ವಿತರಿಸಲಾಗಿದೆ. ಸರ್ಕಾರದಲ್ಲಿ ಹಣ ಇದೆಯೋ ಇಲ್ಲವೋ ಗೊತ್ತಿಲ್ಲ, ಅನೇಕ ಕಡೆಗಳಲ್ಲಿ ಚೆಕ್ ಬೌನ್ಸ್ ಆಗಿರುವ ಮಾಹಿತಿ ಬಂದಿವೆ. ಅವರು ನೀಡುತ್ತಿರುವುದು ಸಾಮಾನ್ಯರಿಗೆ 50 ಸಾವಿರ ಹಾಗೂ ಬಿಪಿಎಲ್ ಕಾರ್ಡುದಾರರಿಗೆ 1 ಲಕ್ಷ. ಮಾಧ್ಯಮದವರು ಸೇರಿದಂತೆ ಬೇರೆ ವರ್ಗದವರು ಕೋವಿಡ್ ಬಂದಾಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಎಷ್ಟು ಖರ್ಚು ಮಾಡಿದ್ದಾರೆ ಎಂಬುದು ನಿಮ್ಮೆಲ್ಲರ ಗಮನಕ್ಕೆ ಬಂದಿರಬಹುದು. ಅನೇಕರು ತಮ್ಮ ಬಳಿ ಇದ್ದ ಚಿನ್ನ ಒಡವೆ ಮಾರಿದ್ದಾರೆ. ವಿವಿಧ ಚಿನ್ನದ ಸಾಲ ಕಂಪನಿಗಳಲ್ಲಿ ಸುಮಾರು ಟನ್ ಗಳಷ್ಟು ಚಿನ್ನ ಗಿರವಿ ಇರಿಸಲಾಗಿದೆ. ನಾನು ಚಂದಾಪುರದಲ್ಲಿ ಕೋವಿಡ್ ಸಾವಾದಾಗ ಕಾಂಗ್ರೆಸ್ ಪಕ್ಷದ ಸಾಂತ್ವಾನ ಕಾರ್ಯಕ್ರಮದ ಮೂಲಕ ಹೋದಾಗ ಆಟೋ ಓಡಿಸುತ್ತಿದ್ದ ವ್ಯಕ್ತಿ ಸತ್ತಿದ್ದ. ಮನೆಯಲ್ಲಿ ಆತನ ತಂದೆ ವಯಸ್ಸಾದವರು ಇದ್ದರು, ಇನ್ನು ಮೃತನ ಹೆಂಡತಿ ಹಾಗೂ ಮಗು ಇತ್ತು. ತಂದೆಯನ್ನು ಕೇಳಿದಾಗ ನನ್ನ ಕೈಯಲ್ಲಿ ಕೆಲಸ ಮಾಡಲು ಆಗುವುದಿಲ್ಲ, ಜೀವನ ಮಾಡುವುದು ಹೇಗೆ? ಎಂದು ಕೇಳಿದರು. ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು ಎಂದು ಕೇಳಿಕೊಂಡೆವು. ಆದರೆ ಸರ್ಕಾರ ನ್ಯಾಯಾಲಯ ಹೇಳಿದ ನಂತರ 1 ಲಕ್ಷ ಮಾತ್ರ ನೀಡುತ್ತಿದೆ’ ಎಂದು ಉತ್ತರಿಸಿದರು.

ಮುಖ್ಯಮಂತ್ರಿಗಳು ಅಂತರರಾಜ್ಯ ಜಲ ವಿವಾದಕ್ಕೆ ಸಂಬಂಧಿಸಿದ ಕಾನೂನು ಬದಲಾವಣೆ ಬಗ್ಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ನಮಗೆ ಮೇಕೆದಾಟು ಯೋಜನೆ ಆದರೆ ಸಾಕು. ಅದನ್ನು ಮಾಡಿದರೆ ಸಂತೋಷ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಎರಡೂವರೆ ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ ಎಂದು ನಮ್ಮ ಹೋರಾಟ ನಡೆಯುತ್ತಿದೆ. ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಅವರೇ ಅನುಮೋದನೆ ಪಡೆದು ಯೋಜನೆ ಆರಂಭಿಸಲಿ. ಎಲದರಲ್ಲೂ ರಾಜಕಾರಣ ಮಾಡಿದರೆ ಜನರಿಗೆ ನೆರವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಎಲ್ಲ ಪಕ್ಷಗಳನ್ನು ಕರೆದು ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿಗೆ ತೆಗೆದುಕೊಂಡು ಹೋಗು ಅನುಮತಿ ಪಡೆಯುವುದು ಅವರ ಜವಾಬ್ದಾರಿ. ತಮಿಳುನಾಡಿನ ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಕಾವೇರಿಯ ಕುಡಿಯುವ ನೀರು ನೀಡಲಾಗುತ್ತಿದೆ. ನಮ್ಮಲ್ಲೂ ನಾಲ್ಕೈದು ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರು ನೀಡಬಹುದಲ್ಲವೇ? ಇವರು  ಹೋರಾಟದಿಂದ ನಮ್ಮ ಪಕ್ಷಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಅದನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನಪಟ್ಟರು. ಕೋವಿಡ್ ಹೆಚ್ಚಾದ ಪರಿಣಾಮ ನಾವು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಕೋವಿಡ್ ಸಂಪೂರ್ಣವಾಗಿ ಕಡಿಮೆಯಾದ ನಂತರ ನಾವು ಹೋರಾಟ  ಮುಂದುವರಿಸುತ್ತೇವೆ. ಈ ಕಾಲಾವಕಾಶದಲ್ಲಿ ಅವರು ಯೋಜನೆ ಜಾರಿ ಮಾಡದಿದ್ದರೆ ನಮ್ಮ ಹೋರಾಟ  ಮುಂದುವರಿಯಲಿದೆ’ ಎಂದರು.

ಪಾದಯಾತ್ರೆ ನಿಲ್ಲಿಸಲು ವೀಕೆಂಟ್ ಕರ್ಫ್ಯೂ ಜಾರಿ ಮಾಡಿದರೇ ಎಂಬ ಪ್ರಶ್ನೆಗೆ, ‘ನಾವು ಪಾದಯಾತ್ರೆ ಹೋರಾಟ  ಮಾಡುತ್ತೇವೆ. ಅದನ್ನು ನಿಲ್ಲಿಸಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ನಿನ್ನೆ 48 ಸಾವಿರ ಸೋಂಕು ಪ್ರಕರಣಗಳು ದಾಖಲಾಗಿವೆ. ನಾವು ಹೋರಾಟ ಮಾಡುತ್ತೇವೆ ಎಂದು ಅವರಿಗೆ ಗೊತ್ತಿತ್ತು. ಆಗ ನಮ್ಮ ಪಕ್ಷದ ಮುಖಂಡರು, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಮುಖಂಡರನ್ನು ಕರೆದು, ರಾಜ್ಯದ ಜನರ ಹಿತಾಸಕ್ತಿ ನಾವೆಲ್ಲ ಒಟ್ಟಾಗಿ ಹೋರಾಡೋಣ ಎಂದು ಹೇಳಬಹುದಿತ್ತು. ಆದರೆ ಅವರು ಹೇಳಲಿಲ್ಲ. ಪ್ರಪಂಚದಲ್ಲಿ ಎಲ್ಲದರೂ ಸೋಂಕು ಹೆಚ್ಚುತ್ತಿರುವಾಗ ಕರ್ಫ್ಯೂ ತೆರವು ಮಾಡುವುದನ್ನು ನೋಡಿದ್ದೀರಾ? ಇವರು ನಿರ್ಬಂಧ ಹೇರುವಾಗ, ಹೇರುವುದಿಲ್ಲ, ಯಾವಾಗ ಹೇರಬಾರದೋ ಆಗ ನಿರ್ಬಂಧ ಹೇರುತ್ತಾರೆ’ ಎಂದು ಉತ್ತರಿಸಿದರು.

ಮೇಕೆದಾಟು ಹೇರಾಟಕ್ಕೆ ಸಡ್ಡು ಹೊಡೆಯಲು ಮಹದಾಯಿ ಹೋರಾಟವೇ  ಎಂಬ ಪ್ರಶ್ನೆಗೆ, ‘ಇಲ್ಲ, ಇದೇ ಸ್ಥಳದಲ್ಲಿ ನಾನು ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು, ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೋಳಿ ಅವರು ಹಾಗೂ ಇತರ ನಾಯಕರೆಲ್ಲರೂ ಕೂತು ಚರ್ಚಿಸಿದ್ದೇವೆ. ಪಕ್ಷದಲ್ಲಿ ಯಾವುದೇ ಶೀತಲ ಸಮರವಿಲ್ಲ. ಸಮರಗಳು ಬಿಜೆಪಿಯಲ್ಲಿ ಈಗಾಗಲೇ ಆರಂಭವಾಗಿದೆ. ಯಾರ ನಡುವೆ ಆರಂಭವಾಗಿದೆ ಎಂದು ನಿಮಗೆಲ್ಲರಿಗೂ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ವೀಕೆಂಡ್ ಕರ್ಫ್ಯೂ ಹಿಂಪಡೆದು, ನೈಟ್ ಕರ್ಫ್ಯೂ ಮುಂದುವರಿಸಿರುವ ಬಗ್ಗೆ ಕೇಳಿದಾಗ, ‘ನಾವು ರಾಜಕಾರಣಿಗಳು ಇಂತಹ ಪರಿಸ್ಥಿತಿಯಲ್ಲಿ ತಜ್ಞರ ಸಲಹೆ ಪಡೆಯಬೇಕು. ತಜ್ಞರ ಸಲಹೆ ಪಡೆದರೆ ಪ್ರಾರಂಭದಲ್ಲಿ ಕರ್ಫ್ಯೂ ಅಗತ್ಯವಿರಲಿಲ್ಲ. ಸೋಂಕು ಹೆಚ್ಚುತ್ತಿರುವಾಗ ತೆರವುಗೊಳಿಸುತ್ತಿದ್ದು, ಇದು ರಾಜಕಾರಣಿಗಳ ಅಭಿಪ್ರಾಯವೋ, ತಜ್ಞರ ಅಭಿಪ್ರಾಯವೋ ಎಂದು ಮಾಧ್ಯಮಗಳು ಸರ್ಕಾರವನ್ನು ಕೇಳಬೇಕು’ ಎಂದು ಹೇಳಿದರು.

ಅನ್ಯ ಪಕ್ಷಗಳಿಂದ ಬೆಂಗಳೂರಿನ ನಾಯಕರು ಕಾಂಗ್ರೆಸ್ ಗೆ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸದ್ಯಕ್ಕೆ ಆ ರೀತಿ ಯಾವುದೇ ಬೆಳವಣಿಗೆಗಳಿಲ್ಲ. ಆ ರೀತಿ ಇದ್ದರೆ ಮಾಧ್ಯಮಗಳ ಗಮನಕ್ಕೆ ತಂದೇತರುತ್ತೇವೆ. ನಾನು ಯಾರಿಗೂ ಆಹ್ವಾನ ನೀಡುವುದಿಲ್ಲ, ವಿವಾದಾತ್ಮಕ ಹೇಳಿಕೆ ನೀಡುವುದಿಲ್ಲ. ಬೇರೆ ಪಕ್ಷದವರನ್ನು ಕರೆತರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾರ್ಯಾಧ್ಯಕ್ಷನಾಗಿ ಎಷ್ಟು ಹೇಳಬೇಕೋ ಅಷ್ಟನ್ನು ಹೇಳಿದ್ದೇನೆ. ಸೂಕ್ತ ಸಮಯಕ್ಕೆ ಬಂದಾಗ ಹೆಚ್ಚಿನ ಮಾಹಿತಿ ನೀಡಬಹುದು’ ಎಂದರು.

ಬಿಬಿಎಂಪಿ ಚುನಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಏಪ್ರಿಲ್ ನಲ್ಲಿ ಬಿಬಿಎಂಪಿ ಚುನಾವಣೆ ನೂರಕ್ಕೆ ನೂರು ಬಾರಿ ನಡೆಯಲಿದೆ. ನ್ಯಾಯಾಲಯಕ್ಕೆ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಾಮರಾಜಪೇಟೆಯ ಬಿಜೆಪಿ ಶಕ್ತಿ ಕೇಂದ್ರದಲ್ಲಿ ನಾಯಕರನ್ನು ಕರೆದು ಚರ್ಚಿಸಿ ಚುನಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಧ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿನ್ನಡೆಯಾಗಿದೆ. ಡಿಲಿಮಿಟೇಶನ್ ಅನ್ನು ಬಿಬಿಎಂಪಿ ಮುಕ್ತ ಆಯುಕ್ತರು ಮಾಡಬೇಕಿತ್ತು. ಆದರೆ ಬೇರೆಯವರ ಕಚೇರಿಯಲ್ಲಿ ಮಾಡಿ ಅದನ್ನು ತಂದಿಡಲು ಪ್ರಯತ್ನಿಸುತ್ತಿದ್ದಾರೆ. ಡಿಲಿಮಿಟೇಷನ್ ಮನಸಿಗೆ ಬಂದಂತೆ ಮಾಡಿದ್ದಾರೆ. 243 ವಾರ್ಡ್ ಮಾಡಲು ಅಸೆಂಬ್ಲಿಯಲ್ಲಿ ಅನುಮೋದನೆ ನೀಡಲಾಗಿದ್ದು, ಇದನ್ನು ಅವೈಜ್ಞಾನಿಕವಾಗಿ, ಅವರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದಾರೆ’ ಎಂದರು.

ವಿಧಾನಸೌಧದ ಬದಲು ಚಾಮರಾಜಪೇಟೆ ಕಚೇರಿ ರಾಜ್ಯದ ಶಕ್ತಿಕೇಂದ್ರವಾಗಿದೆಯೇ ಎಂಬ ಪ್ರಶ್ನೆಗೆ, ‘ಹೌದು, ಯಾವುದೇ ವಿಚಾರ ಅಲ್ಲಿ ನಿರ್ಧಾರವಾದ ನಂತರ ವಿಧಾನಸೌಧಕ್ಕೆ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೆ’ ಎಂದು ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ, ಪ್ರಚಾರ ಸಮಿತಿ ಮುಖ್ಯಸ್ಥರಾದ ಮನೋಹರ್ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here