ಬೀದರ್ : ಬ್ರಿಮ್ಸ್‌ನಲ್ಲಿ ಸಿಬ್ಬಂದಿ ವೇತನ ಬಾಕಿ ಮತ್ತು ಅಕ್ರಮ ನೇಮಕಾತಿ ಸರ್ಕಾರದ ಗಮನಕ್ಕೆ ತರದೇ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನಗರದ ಜಿ.ಪಂ ಸಭಾಂಗಣದಲ್ಲಿ ಶನಿವಾರ ಕೋವಿಡ್ ಸ್ಥಿತಿಗತಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಗ್ರೂಪ್ ಡಿ, ಸ್ವತ್ಛತಾ ಕಾರ್ಮಿಕರು, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳಲಾಗಿದ್ದು, ನಾಲ್ಕೈದು ತಿಂಗಳಿನಿಂದ ಈ ಸಿಬ್ಬಂದಿ ವೇತನ ಬಾಕಿ ಇದೆ. ಜತೆಗೆ ಅಕ್ರಮ ನೇಮಕಾತಿ ನಡೆದಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಶಾಸಕರಾದ ಈಶ್ವರ ಖಂಡ್ರೆ, ರಹೀಮ್ ಖಾನ್ ಅವರು ಬ್ರಿಮ್ಸ್‌ನಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ವೇತನ ನೀಡಿಲ್ಲ. ಅಲ್ಲದೇ ಅಕ್ರಮವಾಗಿ ನೇಮಕಾತಿ ಕುರಿತು ವಿಷಯ ಪ್ರಸ್ತಾಪಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಅಧಿ ಕಾರಿಗಳಿಂದ ಮಾಹಿತಿ ಪಡೆದರು.
ನೇಮಕಾತಿ ಮತ್ತು ವೇತನ ವಿಳಂಬ ಕುರಿತು ಸಮಸ್ಯೆ ಇದ್ದು, ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆಯುವೆ. ಶೀಘ್ರದಲ್ಲಿ ಹೊರಗುತ್ತಿಗೆ ಸಿಬ್ಬಂದಿಗೆ ಬಾಕಿ ವೇತನ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ಕುರಿತು ಚರ್ಚಿಸಲಾಯಿತು. ಈ ಸಂಬಂಧ ಶಾಸಕ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ರಾಮಚಂದ್ರನ್, ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 181 ಬಿಪಿಎಲ್, 182 ಎಪಿಎಲ್ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಇನ್ನೂಳಿದವರಿಗೆ ಮಾ.15ರೊಳಗಾಗಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ್, ಅರವಿಂದಕುಮಾರ ಅರಳಿ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಜಿಪಂ ಸಿಇಒ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ ಬಾಬು ಇತರರಿದ್ದರು.