ಕಲಬುರಗಿ: ಇತ್ತೀಚೆಗೆ (ಜ.19) ಪ್ರಕಟಗೊಂಡ 545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಾತಿ ನೀಡದೇ ಸರ್ಕಾರ ಅನ್ಯಾಯವೆಸಗಿದೆ. ಈ ಕುರಿತು ಕೂಡಲೇ ಪ್ರಕಟಿತಗೊಳಿಸಿದ ಆಯ್ಕೆ ಪಟ್ಟಿ ಹಾಗೂ 2020ರ ಸುತ್ತೋಲೆ ರದ್ದುಪಡಿಸಬೇಕೆಂದು ಪಿಎಸ್‍ಐ ವಂಚಿತ ಅಭ್ಯರ್ಥಿಗಳು ಇಂದಿಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿ, ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಯಾವುದೇ ನೇಮಕಾತಿ ನಡೆದರೆ ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ. 8 ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು 2016ರಲ್ಲಿ ಸುತ್ತೋಲೆಯಲ್ಲಿ ಆದೇಶ ಹೊರಡಿಸಿದೆ, ಆದರೆ 545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಹುದ್ದೆಗಳನ್ನು ಕಡೆಗಣಿಸಲಾಗಿದ್ದು, ನೂರಾರು ಪಿಎಸ್‍ಐ ಹುದ್ದೆಗಳ ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ವೇಳೆ ವಂಚಿತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
545 ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ನಾನ್ ಎಚ್‍ಕೆ ಹುದ್ದೆಗಳಲ್ಲಿ ಭರ್ತಿ ಮಾಡಬೇಕು, ಅಲ್ಲದೇ ಕಲ್ಯಾಣ ಕರ್ನಾಟಕ ಹಾಗೂ ನಾನ್‍ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕು, ಆದರೆ ಇವೆಲ್ಲವುಗಳನ್ನು ಉಲ್ಲಂಘಿಸಿ 371 (ಜೆ) ಗೆ ತಿದ್ದುಪಡಿಗೆ ಅನ್ಯಾಯ ಮಾಡಲಾಗಿದೆ. ಹೀಗಾದರೇ ಈ ಭಾಗದ ಅಭ್ಯರ್ಥಿಗಳು ಹೇಗೆ ನೌಕರಿ ಪಡೆಬೇಕು ಎಂದು ತಮ್ಮ ಅಳಲು ತೋಡಿಕೊಂಡರು.
ಪಿಎಸ್‍ಐ ಹುದ್ದೆಗಳಿಗೆ 2020ರ ಮೇ 14 ರಂದು ಪ್ರತ್ಯೇಕ ಅಂದರೆ ನಾನ್ ಎಚ್‍ಕೆ (431), ಕೆಕೆ (125) ಹುದ್ದೆಗಳಿಗೆ ಅಧಿಸೂಚನೆ ನೀಡಲಾಗಿತ್ತು. ಕಾರಣ ನೀಡಿ ಮತ್ತೊಮ್ಮೆ ಜನೆವರಿ 2021ರಲ್ಲಿ ಅಧಿಸೂಚನೆ ಹೊರಡಿಸಿ, ಯಾವ ವೃಂದದ ಹುದ್ದೆಗಳಿಗೆ ಆಯ್ಕೆ ಬಯಸುವಿರಿ ಎಂದು ಸೀಮೀತ ಆದೇಶ ನೀಡಿದ್ದಾರೆ. ಈ ವೇಳೆ ವಿವಿಧ ಕಾರಣಗಳನ್ನು ನೀಡಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ದುರುದ್ದೇಶದಿಂದ ಅನ್ಯಾಯ ಮಾಡಲಾಗಿದೆ ಎಂದಿದ್ದಾರೆ.
ಕೇವಲ ಪಿಎಸ್‍ಐ ಹುದ್ದೆಗಳಿಗೆ ಅಷ್ಟೇ ಅನ್ಯಾಯ ಮಾಡುತ್ತಿಲ್ಲ, ಸರ್ಕಾರದಿಂದಣೆಲ್ಲ ಹುದ್ದೆಗಳಿಗೆ ಈ ಭಾಗದ ಆಕಾಂಕ್ಷಿಗಳಿಗೆ ಸಂಪೂರ್ಣ ಕಡೆಗಣಿಸಲಾಗಿದೆ. ಈ ಕುರಿತು ಶೀಘ್ರ 2020ರ ಸುತ್ತೋಲೆ ಹಿಂಪಡೆಯಬೇಕೆಂದು ಪ್ರತಿಭಟನಾನಿರತ ವಂಚಿತ ಅಭ್ಯರ್ಥಿಗಳು ಆಗ್ರಹಿಸಿದರು.
ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಫೆ. 8 ರಂದು ಬಂದ್‍ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಲ್ಮಾನ ನಗರ್, ಅರ್ಜುನ ಝಳಕಿ, ಉದಯ, ರಾಜಕುಮಾರ ಕುಂಬಾರ, ಶಾರುಖ್ ಅತ್ತಾರ, ಮಲ್ಲಿನಾಥ ತೇಲಿ, ಶಿವರಾಜ, ಸಿದ್ಧನಗೌಡ ಪಾಟೀಲ್, ಹಣಮಂತ ಬಳ್ಳೂರ್ಗಿ, ಬಸವರಾಜ ವಚ್ಚೆ, ಮಲ್ಲಿನಾಥ ಅಕ್ಕಲಕೋಟ್, ಚೇತನ ಶಿರೂರ್, ಅಕ್ಷಯ ಪಾಂಚಾಳ, ಅಜಯ್, ಸೇರಿದಂತೆ 400ಕ್ಕೂ ಹೆಚ್ಚಿನ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.