ಸೊಲ್ಲಾಪುರ : ಕನ್ನಡ ನಮ್ಮ ಮಾತೃ ಭಾಷೆ, ನಮ್ಮ ತಾಯಿ ಭಾಷೆಯ ಬೆಳವಣಿಗೆಗೆ ಸ್ವಾರ್ಥ ಬಿಟ್ಟು ನಾವೇಲ್ಲರೂ ಕನ್ನಡಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಕೇಂದ್ರಿಯ ವಿವಿಯದ ಡಾ.ಬಿ.ಬಿ.ಪೂಜಾರಿ ಹೇಳಿದರು.
ಜತ್ತ ತಾಲೂಕಿನ ಯುವಲೇಖಕ ಮಲಿಕಜಾನ್ ಶೇಖ ಅವರ ಪ್ರಥಮ ಕೃತಿ ‘ಚಿಲಿಪಿಲಿ’ ಮಕ್ಕಳ ಕವನ ಸಂಕಲನವನ್ನು ಇತ್ತಿಚೆಗೆ ಅಕ್ಕಲಕೋಟದಲ್ಲಿ ನಡೆದ ೨ನೇ ಮಹಾರಾಷ್ಟç ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಬಿ.ಬಿ.ಪೂಜಾರಿ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯುವಲೇಖಕ ಮಲಿಕಜಾನ್ ಶೇಖ ಅವರು ಆದರ್ಶ ಕನ್ನಡ ಬಳಗ ಮೂಲಕ ಮಹಾರಾಷ್ಟçದಲ್ಲಿ ಕನ್ನಡ ಕಂಪು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಯುವಲೇಖಕರು ಒಬ್ಬ ಉತ್ತಮ ಸಾಹಿತಿಗಳಾಗಿ ರೂಪುಗೊಳ್ಳಲಿದ್ದಾರೆ. ಮುಂದೆ ಇವರು ಒಬ್ಬ ಶ್ರೇಷ್ಠ ಸಾಹಿತಿಯಾಗಿ ಗುರುತಿಸಿಕೋಳ್ಳಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸಚಿನ ಕಲ್ಯಾಣಶೆಟ್ಟಿ, ಸಮ್ಮೇಳನ ಸರ್ವಾಧ್ಯಕ್ಷ ಡಾ.ಮಧುಮಾಲ ಲಿಗಾಡೆ, ಜತ್ತ ತಾಲೂಕಿನ ಕನ್ನಡ ಹೋರಾಟಗಾರ ಡಾ.ಆರ್.ಕೆ.ಪಾಟೀಲ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಲೇಖಕ ಮಲಿಕಜಾನ ಶೇಖ, ಪೂಜ್ಯ ಬಸವಲಿಂಗ ಶ್ರೀಗಳು, ಪೂಜ್ಯ ಅಭಿನವ ಡಾ.ಬಸವಲಿಂಗ ಶ್ರೀಗಳು, ಪೂಜ್ಯ ಶ್ರೀಕಂಠ ಶ್ರೀಗಳು, ಪೂಜ್ಯ ಅಭಿನವ ಶಿವಲಿಂಗ ಶ್ರೀಗಳು, ಪೂಜ್ಯ ಡಾ.ಶಾಂತಲಿಂಗ ಶ್ರೀಗಳು, ಪೂಜ್ಯ ಪಾಂಡುರಂಗ ಶ್ರೀಗಳು, ವೇ.ಬಸವರಾಜ ಶಾಸ್ತ್ರೀ, ಮಹೇಶ ಹಿಂಡೋಳೆ, ಆನಂದ ತಾನವಡೆ, ರಾಜಶೇಖರ ಉಮರಾಣಿಕರ, ದಯಾನಂದ ಬಿಡವೆ, ರಾಜಶೇಖರ ಮಸೂತಿ, ಬಿಇಒ ಖೂದುಸಿಯಾ ಶೇಖ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿದ್ದರು.
ಮಲಿಕಜಾನ್ ಶೇಖ ಅವರು ಬರೆದ ‘ಚಿಲಿಪಿಲಿ’ ಕವನ ಸಂಕಲನ ಸೊಗಸಾಗಿ ಮೂಡಿ ಬಂದಿದೆ. ಒಂದೊಂದು ಕವನವು ಮಕ್ಕಳ ಬದುಕು, ಸಾಹಿತ್ಯ, ಹಾಸ್ಯ, ಪ್ರಸ್ತುತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವಂತಿದೆ. ಅವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ. –ಡಾ. ಮಧುಮಾಲ ಲಿಗಾಡೆ, ಹಿರಿಯ ಸಾಹಿತಿ, ಸೊಲ್ಲಾಪುರ.
ನಾವಿಂದು ಏನಾಗಿದ್ದೇವೋ ಅದಕ್ಕೆ ಮೂಲಕ ಕಾರಣ ನಮ್ಮ ಮಾತೃ ಭಾಷೆ. ಕನ್ನಡ ಭಾಷೆಯ ಬಗ್ಗೆ ನಮಗೆಲ್ಲ ಅಪಾರ ಅಭಿಮಾನ, ಸ್ವಾಭಿಮಾನವಿರಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾದ್ಯವಾಗಲಿದೆ. ಮಲಿಕಜಾನ್ ಶೇಖ ಅವರು ಬರೆದ ‘ಚಿಲಿಪಿಲಿ’ ಕವನ ಸಂಕಲನ ಮಕ್ಕಳಿಗೆ ಅನುಕೂಲವಾಗಲಿದೆ. – ಸೋಮಶೇಖರ ಜಮಶೆಟ್ಟಿ, ಅಧ್ಯಕ್ಷರು, ಕಸಾಪ ಮಹಾರಾಷ್ಟ್ರ ಘಟಕ.