ಕಲಬುರಗಿ: ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ವಿಶ್ವಕರ್ಮ, ವೀರಶೈವ, ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಉಪ್ಪಾರ ಸಮಾಜ ಸೇರಿದಂತೆ ವಿವಿಧ ನಿಗಮ ಮಂಡಳಿಗಳನ್ನು ರಚಿಸಿದರೂ ಅವುಗಳ ಸಾಧನೆ ಶೂನ್ಯವಾಗಿದೆ, ಹಾಗಾದರೇ ಇವರು ಯಾವ ಪುರುಷಾರ್ಥಕ್ಕಾಗಿ ಹಿಂದೂಗಳನ್ನು ಅಭಿವೃದ್ಧಿ ಮಾಡುತ್ತಾರೆಂಬ ಭರವಸೆ ಇದೆ ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಚುನಾವಣೆ ಗಿಮಿಕ್ ಮಾಡಿಕೊಂಡು ಜನರ ಮೇಲೆ ಕೋಮು ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಬಿಜೆಪಿಯರವರು ಹಿಂದೂಸ್ತಾನವನ್ನು ಪಾಕಿಸ್ತಾನ ಮಾಡಲು ಹೊರಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಮು ಭಾವನೆಗಳನ್ನು ಕೆಡಿಸಲು ಹಲವು ಸೇನೆ, ಸಂಘಟನೆಗಳು ಷಡ್ಯಂತ್ರ ನಡೆಸಿವೆ, ಅಂತಹ ಪುಂಡರಿಗೆ ನಿಯಂತ್ರಣ ಮಾಡಲು ಆಗದಿರುವ ಈ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೌನಿಯಾಗಿದ್ದಾರೆ. ಈಬ ತರಹದ ಮೌನಿಯಿಂದಲೆ ರಾಜ್ಯಕ್ಕೆ ಅತೀ ಕೆಟ್ಟ ಹೆಸರು ಬರುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಗರಂ ಆದರು.
ನೆರೆ ರಾಜ್ಯದಿಂದ ಹೀಯಾಳಿಸುವ ಮಟ್ಟಿಗೆ ಕೋಮು ಸಾಮರಸ್ಯವನ್ನು ಹಾಳು ಮಾಡಿ, ರಾಜ್ಯವನ್ನು ಒಂಥರ ಜೋಕ್ ವನ್ನಾಗಿ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಅವರು ಸರ್ಕಾರದ ಆಡಳಿತ ವಿರುದ್ಧ ಹರಿಹಾಯ್ದರು.
ಕಳೆದ ಮೂರು ವರ್ಷದಿಂದ ಬಿಜೆಪಿಯಿಂದ ಯಾವುದೇ ಹೇಳಿಕೊಳ್ಳುವಂತಹ ಸಾಧನೆ, ಯೋಜನೆಗಳನ್ನು ಜಾರಿಗೊಳಿಸದಿದ್ದರಿಂದ ಚುನಾವಣೆ ಸಮೀಪಿಸುತ್ತಿರುವಾಗ ಕೋಮುವಾದಿ ರಾಜಕಾರಣ ಮಾಡಿ ಸಾಮಾನ್ಯ ಜನರನ್ನು ಹಾಳು ಮಾಡಿಕೊಂಡು , ಮತ ಗಿಟ್ಟಿಸಿಕೊಳ್ಳುವುದು ಇವರ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬೆಲೆ ಏರಿಕೆಯಾಗಿದೆ ಅಂದರೆ ಕಾಶ್ಮೀರ ಫೈಲ್ಸ್, ಕೋವಿಡ್ ಬಗ್ಗೆ ಕೇಳಿದರೆ ಹಿಜಾಬ್ ಮುಂದಿಡುವುದು, ರೈತರ ಸಮಸ್ಯೆ ಹೇಳಿದರೆ ಜಟ್ಕಾ ತಂದಿಡುವುದು, ನಿರುದ್ಯೋಗದ ಕುರಿತಾಗಿ ಪ್ರಶ್ನಿಸಿದರೇ ಭಗದ್ಗೀತೆ ಓದಿಲ್ಲವಾ ಎಂದು ಕೇಳುವುದು, ಭ್ರಷ್ಟಾಚಾರದ ಮಾತೆತ್ತಿದಾಗ ಮುಸ್ಲಿಂ ವ್ಯಾಪಾರಿ, ಲೌಡ್ ಸ್ಪೀಕರ್ ಬಂದ್ ಮಾಡುವ ಕುರಿತಾಗಿ ಸುದ್ದಿ ಎಬ್ಬಿಸುವುದು ಇವರ ಹೀನ ಕೆಲಸಗಳಾಗಿವೆ. ಒಂದೆಡೆ ಹಲಾಲ್ ಸರ್ಟೀಫಿಕೇಟ್ ಪಡೆದು ಬಿಜೆಪಿ ನಾಯಕರು ಹಾಗೂ ಮೋದಿ ಬೆಂಬಲಿತ ಉದ್ಯಮಿಗಳು ಮುಸ್ಲಿಂ ರಾಷ್ಟ್ರಗಳ ವಿರುದ್ಧ ದೊಡ್ಡ ವ್ಯವಹಾರದಲ್ಲಿ ತೊಡಗಿದ್ದಾರೆ, ಇತ್ತ ಚುನಾವಣೆಗೋಸ್ಕರ ಸಾಮಾನ್ಯ ಜನರ ಭಾವನೆ ಜೊತೆಗೆ ಆಟವಾಡುತ್ತಿದ್ದಾರೆಂದರು.
ಮುಸ್ಲಿಂರ ಜೊತೆಗೆ ಹಲಾಲ್ ವ್ಯಾಪಾರೀಕರಣ ಆರ್ಥಿಕ ಜಿಹಾದ ಎಂದಾಗಿ ಹೇಳಿಕೆ ನೀಡಿದ್ದಾರೆ. ಹಾಗಾದರೇ ಮೋದಿ ಬೆಂಬಲಿತ ಅದಾನಿ, ಅಂಬಾನಿಯವರ ದೊಡ್ಡ ಕಂಪನಿಗಳು ಹಲಾಲ್ ಸರ್ಟೀಫೀಕೇಟ್ ತೆಗೆದುಕೊಂಡು ಬೃಹತ್ ವ್ಯಾಪಾರ ಮಾಡುತ್ತಿದ್ದಾರೆ. ಮೊದಲು ಅವರ ಸಟೀಫೀಕೇಟ್ ರದ್ದುಪಡಿಸಿ, ಅವರೂ ಸಹ ಜಟ್ಕಾ ಸರ್ಟಿಫಿಕೇಟ್ ತೆಗೆದುಕೊಂಡು ವ್ಯಾಪಾರ ಮಾಡಲಿ ಎಂದು ಮೊದಲು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಅವರು ಸಿಟಿ ರವಿ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ತಿಪ್ಪಣಪ್ಪ ಕಮಕನೂರ, ಶರಣು ಮೋದಿ, ಸಂತೋಷ ಬಿಲಗುಂದಿ, ಕಿರಣ ದೇಶಮುಖ, ಪ್ರಶಾಂತ ಕೊರಳ್ಳಿ, ಈರಣ್ಣಾ ಝಳಕಿ, ಶಿವಾನಂದ ಹೊನಗುಂಟಿ ಸೇರಿದಂತೆ ಮತ್ತಿತರ ಮುಖಂಡರು ಇದ್ದರು.