ಕಲಬುರಗಿ: ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಸ್ಥಳೀಯ ನೈಸರ್ಗಿಕ ವಿಕೋಪದಡಿ ಜಿಲ್ಲೆಯ 9911 ರೈತ ದೂರುದಾರರಿಗೆ ಬಾಕಿ ಹಣ ಸೇರಿದಂತೆ 8.49 ಕೋಟಿ ರೂ. ಹಣ ಶೀಘ್ರದಲ್ಲಿಯೆ ಪಾವತಿಸಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ ಯೂನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿಯ ಬೆಂಗಳೂರಿನ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.
ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಬಾಕಿ ಉಳಿದ ರೈತರಿಗೆ ಬರಬೇಕಾದ ವಿಮಾ ಹಣ ಕೂಡಲೆ ಪಾವತಿಸುವಂತೆ ವಿಮಾ ಕಂಪನಿಗಳಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಸೂಚಿಸಿದರು.
ಕಲಬುರಗಿ ಜಿಲ್ಲೆಯಲ್ಲಿ 2021-22ನೇ ಸಾಲಿಗೆ ಸ್ಥಳಿಯ ನೈಸರ್ಗಿಕ ವಿಕೋಪ ಪರಿಹಾರದಡಿ ಜಿಲ್ಲೆಯಲ್ಲಿ 33,109 ದೂರುಗಳು ರೈತರಿಂದ ದಾಖಲಾಗಿವೆ. ಇದರಲ್ಲಿ 21,521 ರೈತರಿಗೆ 22.013 ಕೋಟಿ ರೂ. ಹಣ ಈಗಾಗಲೆ ಪಾವತಿಸಲಾಗಿದೆ. ಉಳಿದಂತೆ 3,480 ದೂರುದಾರ ರೈತರಿಗೆ ಭಾಗಶಃ ಹಣ ಪಾವತಿಸಿದ್ದು, ಬಾಕಿ ಹಣ 2.506 ಕೋಟಿ ರೂ. ಗಳನ್ನು ಏಪ್ರಿಲ್ 10 ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಾಗಿ ವಿಮಾ ಕಂಪನಿಯ ಪ್ರತಿನಿಧಿಗಳು ತಿಳಿಸಿದರು.
ಇದಲ್ಲದೆ ತಡವಾಗಿ ಬೆಳೆ ಹಾನಿ ದೂರನ್ನು ದಾಖಲಿಸಿದ 6,431 ರೈತರಿಗೂ ಸಹ 5.991 ಕೋಟಿ ಹಣವನ್ನು ಇದೇ ಏಪ್ರಿಲ್ 20 ರೊಳಗಾಗಿ ಪಾವತಿಸಲಾಗುವುದೆಂದು ವಿಮಾ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಕೊಂಡರು.
ಇದರಿಂದ ಜಿಲ್ಲೆಯಲ್ಲಿ 2021-22 ಮುಂಗಾರು ಹಂಗಾಮಿಗೆ ಸಂಬಂಧಿಸದಂತೆ ಸ್ಥಳಿಯ ನೈಸರ್ಗಿಕ ವಿಕೋಪ ಘಟಕದಡಿ ಒಟ್ಟಾರೆ ದೂರು ಸಲ್ಲಿಸಿದ ಎಲ್ಲಾ ರೈತರಿಗೆ ಅರ್ಹ ವಿಮೆ ಪರಿಹಾರ ದೊರಕುವಂತಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಇಂತೆಜಾರ್ ಹುಸೇನ್, ಜಂಟಿ ಕೃಷಿ ನಿರ್ದೇಶಕರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ. ರತೇಂದ್ರನಾಥ ಸೂಗೂರು, ವಿಮಾ ಸಂಸ್ಥೆಯ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ ಮನಸೂರ್ ಖಾನ್ ಸೇರಿದಂತೆ ಕೃಷಿ ಇಲಾಖೆಯ ಇನ್ನಿತರ ಅಧಿಕಾರಿಗಳು ಮತ್ತು ವಿಮಾ ಸಂಸ್ಥೆಯ ಪ್ರತಿನಿಧಿಗಳು ಇದ್ದರು