ಸುರಪುರ: ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷಗೊಂಡು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಿರಿಯ ವಯಸ್ಸಿನ ಬಾಲಕರಿಬ್ಬರು ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಹೋರಾಟಗಾರರಿಗೆ ವಿಶಿಷ್ಟವಾಗಿ ನಮನ ಸಲ್ಲಿಸಲು ಮುಂದಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬೀದರ ಜಿಲ್ಲೆಯ ಔರಾದ ಪಟ್ಟಣದ ೧೬ ವರ್ಷದ ಅವಳಿ ಸಹೋದರರಾದ ಅರುಣ ರ‍್ಯಾಕಲೆ ಮತ್ತು ಕರುಣ ರ‍್ಯಾಕಲೆ ಈಗ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ.ಕಳೆದ ೫ ದಿನಗಳ ಹಿಂದೆ ಔರಾದ ಪಟ್ಟಣದ ಅಮರೇಶ್ವರ ದೇವಸ್ಥಾನದಿಂದ ಚಾಮರಾಜನಗರದ ಮಲೆ ಮಾದೇಶ್ವರ ದೇವಸ್ಥಾನದ ವರೆಗೆ ದಿನಕ್ಕೆ ೫೦ ಕಿಲೋ ಮೀಟರ್‌ನಂತೆ ಸೈಕಲ್ ಯಾತ್ರೆಯನ್ನು ಹೊರಟು ಸ್ವಾತಂತ್ರ್ಯ ಹೋರಾಟಗಾರರನ್ನು ನಮಿಸುವ ಸಾಹಸಕ್ಕೆ ಮುಂದಾಗಿದ್ದಾರೆ.
ಸೈಕಲ್ ಯಾತ್ರೆ ಶುಕ್ರವಾರ ಮುಂಜಾನೆ ಸುರಪುರ ನಗರಕ್ಕೆ ಆಗಮಿಸುತ್ತಿದ್ದಂತೆ ದಾರಿಯುದ್ದಕ್ಕೂ ಎಲ್ಲಾ ಗ್ರಾಮಗಳ ಜನರು ಬಾಲಕರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಯಾತ್ರೆಗೆ ಶುಭ ಹಾರೈಸಿದ್ದಾರೆ.ಸುರಪುರ ನಗರದಲ್ಲಿ ರಾಮ್ ಸೇನಾ ಸಂಘಟನೆ ಸೇರಿದಂತೆ ಅನೇಕ ದೇಶಭಕ್ತರು ಬಾಲಕರಿಗೆ ಸನ್ಮಾನಿಸುವ ಜೊತೆಗೆ ನಗರದಲ್ಲಿಯೇ ಸಂಜೆಯವರರೆಗೂ ಉಳಿದುಕೊಳ್ಳಲು ನೆರವಾಗಿದ್ದಾರೆ.
ತಮ್ಮ ಯಾತ್ರೆಯ ಕುರಿತು ಬಾಲಕರು ಮಾತನಾಡಿ,ನಮಗೆ ಭಗತ್‌ಸಿಂಗ್ ಆದರ್ಶವಾಗಿದ್ದಾರೆ.ಅಲ್ಲದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಾಣವನ್ನೇ ಕೊಟ್ಟಿದ್ದಾರೆ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ,ಅದನ್ನು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸೈಕಲ್ ಯಾತ್ರೆ ಮೂಲಕ ನಮನ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಡಾ:ಉಪೇಂದ್ರ ನಾಯಕ ಸುಬೇದಾರ, ರಾಮ್ ಸೇನಾ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣು ನಾಯಕ ದೀವಳಗುಡ್ಡ,ಸಿದ್ದು ಚೊಕ್ಕಾ, ಸತ್ಯಂಪೇಟೆ,ಅಮರೇಶ ಕುಂಬಾರ,ಮರೆಪ್ಪ ದಿವಳಗುಡ್ಡ,ನಿತೀಶಕುಮಾರ ಲಕ್ಷ್ಮೀಪುರ,ಯಲ್ಲಪ್ಪ ತೆಲಗೂರು,ಬಸವರಾಜ ಚಂದನಕೇರಿ,ಕಾಂತಪ್ಪ ಎಲಿಗಾರ,ಕಂಡಪ್ಪ ಎಲಿಗಾರ ಸೇರಿದಂತೆ ಅನೇಕರಿದ್ದರು.