ದೇವದುರ್ಗ: ತಾಲೂಕು ಜಾಲಹಳ್ಳಿ ಪಟ್ಟಣದ ಸುಪ್ರಸಿದ್ಧ ರಂಗನಾಥ ಸ್ವಾಮಿಯ ಜಾತ್ರೆ ನಿಮಿತ್ಯ ೯ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಏ.೧೬ ರಂದು ರಥೋತ್ಸವ ನಡೆಯಲಿದೆ.
ರಥೋತ್ಸವಕ್ಕೆ ಜಾತ್ರೆ ಪ್ರತಿವರ್ಷ ಯುಗಾದಿ ಹಬ್ಬ ಮುಗಿದ ದಿನಗಳ ನಂತರ ಆರಂಭವಾಗುವ ಜಾಲಹಳ್ಳಿ ಜಾತ್ರೆಯು ಹಲವು ವಿಶೇಷತೆಗಳಿಂದ ಕೂಡಿರುತ್ತದೆ. ಸುಮಾರು ನೂರಕ್ಕೂ ಹೆಚ್ಚು ಹಳ್ಳಿಗಳ ಜನರು ಭಾಗವಹಿಸಿ ಈ ಜಾತ್ರೆಗೆ ಕಳೆ ನೀಡುವ ಮೂಲಕ ದೈವಿಕ ಶಕ್ತಿಗೆ ವಿಶೇಷ ಮಹತ್ವ ನೀಡುತ್ತಾರೆ.
ರಥೋತ್ಸವ ಮುಂಚೆ ಸತತ ೯ ದಿನಗಳ ಕಾಲ ರಂಗನಾಥ ಸ್ವಾಮಿಯ ವಾಹನಗಳು ಎಂದು ಅನಾದಿ ಕಾಲ ದಿಂದಲೂ ಪೂಜಿಸಿಕೊಂಡು ಬಂದಿರುವ ಮೀನು, ಆಮೆ,ನಾಗಪ್ಪ, ನವಿಲು,ಸಿಂಹ, ಕುದುರೆ, ಹನುಮಂತ, ಗರುಡುವಾನ,ಹಾಗೂ ಆನೆ,ಸೇರಿದಂತೆ ೯ ವಾಹನಗಳ ಸೇವೆ ಪ್ರತಿ ದಿನ ಅದ್ದೂರಿಯಾಗಿ ನಡೆಯುತ್ತದೆ.
ವಾಹನಗಳ ಸೇವೆಯಲ್ಲಿ ಪ್ರಮುಖವಾಗಿ ಐದು ಮತ್ತು ಏಳನೇ ದಿನ ನಡೆಯುವ ಹನುಮಂತ ಹಾಗೂ ಗರುಡುವಾಹನ ಸೇವೆ ಆತಂತ್ಯ ವಿಜೃಂಭಣೆಯಿಂದ ಜರುಗತ್ತದೆ. ಅದರಲ್ಲೂ ಗರುಡ ಮತ್ತು ಹನುಮ ವಾಹನೋತ್ಸವ ದಿನಗಳಂದು ವಿವಿಧ ಹಳ್ಳಿಗಳಿಂದ ಜನ ಸಂದಣಿ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿರುತ್ತದೆ.
ವಿಶೇಷವಾಗಿ ರಥೋತ್ಸವದ ದಿನ ಹಾಗೂ ಅದರ ಹಿಂದಿನ ದಿನ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರುಗುವ ನೀರಿನಾಟ ಜಿಲ್ಲೆಯಾಧ್ಯಾಂತ ಗಮನ ಸೆಳೆಯುತ್ತದೆ.
ಏ.೧೬ ರಂದು ರಥೋತ್ಸವ ಜರುಗಲಿದ್ದು, ಜಾತ್ರೆಗಾಗಿ ಸಿದ್ಧತೆಗಳು ನಡೆದಿದ್ದು, ಪಟ್ಟಣ ಸಿಂಗಾರಗೊಳ್ಳುತ್ತಿದೆ. ಜಾತ್ರೆ ಅಂಗವಾಗಿ ನಡೆಯುವ ಜಾನುವಾರುಗಳ ಮಾರಾಟ ಮತ್ತು ಖರೀದಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.