ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಜುಲೈ ೧೫ರಂದು ಮಧ್ಯಾಹ್ನ ೧ ಗಂಟೆಗೆ ಬಂಜಾರಾ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಹಮ್ಮಿಕೊಂಡಿದೆ ಎಂದು ಬಂಜಾರಾ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸುರೇಶ್ ಜಾಧವ್ ಅವರು ಇಲ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಸಮಾಜದ ಚುನಾಯಿತ ಜನಪ್ರತಿನಿಧಿಗಳಿಗೆ ಹಾಗೂ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದವರಿಗೆ ಮತ್ತು ಬಡ್ತಿ ಹೊಂದಿದವರಿಗೆ ಮತ್ತು ಸೇವಾ ನಿವೃತ್ತಿಯಾದವರಿಗೂ ಸಹ ಸನ್ಮಾನಿಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ದ್ವಿತೀಯ ಹಾಗೂ ತಾಂತ್ರಿಕ ಪದವಿ ಸೇರಿ ಶೇಕಡಾ ೭೫ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಂಜಾರಾ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಗುವುದು ಎಂದು ಹೇಳಿದ ಅವರು, ಸಂಘವು ಕಳೆದ ೨೯ ವರ್ಷಗಳಿಂದಲೂ ಪ್ರತಿಭಾ ಪುರಸ್ಕಾರವನ್ನು ಆಯೋಜಿಸುತ್ತ ಬಂದಿದೆ ಎಂದರು.
ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಆಗಸ್ಟ್ ೧೩ರೊಳಗಾಗಿ ಅಂಕಪಟ್ಟಿ ಹಾಗೂ ಪೂರ್ಣ ಮಾಹಿತಿಯನ್ನು ಸಂಘಕ್ಕೆ ಒದಗಿಸಬೇಕು. ಮಾಹಿತಿಗಾಗಿ ಮೊಬೈಲ್ ನಂಬರ್ ೯೮೮೬೦೭೩೮೪೯ಗೆ ಸಂಪರ್ಕಿಸಲು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಪವಾರ್, ಪ್ರೇಮಸಿಂಗ್ ಚವ್ಹಾಣ್, ಹರಿಶ್ಚಂದ್ರ ರಾಠೋಡ್, ಬಾಬು ಎಂ. ಜಾಧವ್, ಡಾ. ಎನ್.ಎಸ್. ಜಾಧವ್ ಮುಂತಾದವರು ಉಪಸ್ಥಿತರಿದ್ದರು.