ರೈತ ಸಶಕ್ತನಾದರೆ – ದೇಶ ಸಶಕ್ತವಾದಂತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0
21

ಬೆಂಗಳೂರು: ರೈತರು ಈ ಭೂಮಿಯ ರಕ್ಷಕರಾಗಿದ್ದು, ಅವರಿಂದ ಸಾವಿರಾರು ವರ್ಷಗಳ ಆಯುಷ್ಯದ ಈ ಭೂಮಿ ಇಂದು ಸಹ ಆರೋಗ್ಯವಾಗಿರಲು ಕಾರಣರಾಗಿದ್ದಾರೆ. ರೈತರು ನಿಜವಾದ ಭೂರಕ್ಷಕರು ಎಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಜಿ.ಕೆ.ವಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಬ್ಯಾಂಕ್ ನೆರವಿನ ರಾಷ್ಟ್ರಮಟ್ಟದ “ರಿವಾರ್ಡ್” ಯೋಜನೆ, ಜಲಾನಯನ ಉತ್ಕøಷ್ಟತಾ ಕೇಂದ್ರ ಉದ್ಘಾಟನೆ, ಎಫ್‍ಪಿಓಗಳ ಏಕರೂಪ ಬ್ರಾಂಡಿಂಗ್ ಸ್ಪರ್ಧೆಯ ಅನಾವರಣ ಹಾಗೂ ಅತ್ಯುತ್ತಮ ರೈತ ಉತ್ಪಾದಕರ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ರೈತರದ್ದು ಬಯಲು ಬದುಕು, ಸ್ತಿರತೆ ಇರುವುದಿಲ್ಲ ಆದರೂ ಸಹ ಈ ಭೂಮಿ ತಾಯಿಯನ್ನು ಅತ್ಯಂತ ಹೆಚ್ಚು ಪ್ರೀತಿಸುವ ಜನರು ಅವರು ಎಂದು ಹೇಳಿದರು.

Contact Your\'s Advertisement; 9902492681

ನಮ್ಮ ಸರ್ಕಾರದ ಪ್ರಮುಖ ಗುರಿ ರೈತರ ಬದುಕಿಗೆ ಸ್ತಿರತೆಯನ್ನು ಒದಗಿಸುವುದಾಗಿದೆ, ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರು ಭೂಮಿ ತಾಯಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಈ ಮನುಷ್ಯನ ಜೀವನ ತಾಯಿ ಗರ್ಭದಿಂದ ಭೂಮಿ ತಾಯಿಯ ಗರ್ಭಕ್ಕೆ ಸೇರುವತನಕ ಎಂದರು.

ಸ್ವಾತಂತ್ರ್ಯ ನಂತರದಲ್ಲಿದ್ದ ಆಹಾರದ ಕೊರತೆ ಇಂದಿಲ್ಲ, ಭಾರತದ ಭೂಮಿ ಅಷ್ಟೇ ಇದೆ ಆದರೆ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ, ಇಂತಹ ದಿನಗಳಲ್ಲಿ ಸಹ ದೇಶದ ಎಲ್ಲರಿಗೂ ಆಹಾರ ದೊರೆತು ಇಂದು ನಾವು ಇತರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಕೃಷಿಯಲ್ಲಿ ಕ್ರಾಂತಿ ಮಾಡಲಾಗಿದೆ. ಕೃಷಿ ಬೆಳೆದಿದೆ ಆದರೇ ರೈತ ಇನ್ನೂ ಹಾಗೇ ಇದ್ದಾನೆ, ಅದಕ್ಕಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಪ್ರಧಾನಮಂತ್ರಿ ಮೋದಿಯವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಕೃಷಿ ಇಲಾಖೆ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಬೇಕು, ಕೃಷಿ ವಿವಿಗಳ ಪಾತ್ರ ಮಹತ್ವದ್ದಾಗಿದ್ದು, ಕ್ಯಾಂಪಸ್‍ನಿಂದ ಹೊರಬರಬೇಕು, ರೈತರ ಹೊಲಗಳಲ್ಲಿ ಸಂಶೋಧನೆಗಳಾಗಬೇಕು, ವಲಯ ಆಧಾರಿತ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದ್ದು, ವಿವಿಗಳ ಸಂಶೋಧನೆಗಳು ರೈತರಿಗೆ ಸಹಾಯವಾಗುವಂತಿರಬೇಕು.

ಸರ್ಕಾರದ ಹಳೆ ಯೋಜನೆಗಳಾದ ಸುಜಲ ಯೋಜನೆಯ ಹಂತ-1,2,3 ರ ಪರಿಣಾಮಗಳನ್ನು ಅಧ್ಯಯನ ನಡೆಸಿ ಸುಜಲ ಯೋಜನೆ ಹಂತ-4ರಲ್ಲಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಮುಂದಾಗಬೇಕು, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲಾ ಉಪಕ್ರಮಗಳು ಭೂಮಿಗೆ ಸಂಬಂಧಿಸಿದ್ದು ಹಂಗಾಗಿ ಭೂಮಿಯ ರಕ್ಷಣೆ ಪ್ರತಿಯೊಬ್ಬರದ್ದು ಎಂದು ತಿಳಿಸಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರು ಮಾತನಾಡಿ ಸ್ವಾತಂತ್ರ್ಯದ ಸಮಯದಲ್ಲಿ ಜೈ ಜವಾನ್, ನಂತರ ಜೈ ಕಿಸಾನ್ ಈಗ ಜೈ ವಿಜ್ಞಾನ್ ಎಂದು ಮಾನ್ಯ ಪ್ರಧಾನಮಂತ್ರಿಗಳು ಹೇಳಿದ್ದಾರೆ, ಇಂದಿನ ಕೃಷಿ ಕ್ರಾಂತಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅವಶ್ಯಕತೆ ಇದ್ದು ಈ ಕುರಿತು ಹೆಚ್ಚಿನ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಕೃಷಿ ಅಭಿವೃದ್ಧಿಯ ಜೊತೆಯಲ್ಲಿ ಮಣ್ಣಿನ ಸಂರಕ್ಷಣೆಗಾಗಿ ಕಂಕಣಬದ್ಧವಾಗಿದ್ದು, ಇದಕ್ಕಾಗಿ ದೇಶದ ಲಕ್ಷಾಂತರ ಹೆಕ್ಟೆರ್ ಅನುಪಯುಕ್ತ ಭೂಮಿಯನ್ನು ಉಪಯುಕ್ತ ಮಾಡುವಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ನಮ್ಮ ದೇಶ ಹೈನುಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ, ಇಂದು ನಾವು ನಮ್ಮ ಜನಸಂಖ್ಯೆಯ ಅವಶ್ಯಕತೆಗಿಂತ ಹೆಚ್ಚಿನ ಬೆಳೆಯನ್ನು ಬೆಳೆಯುತ್ತಿದ್ದೇವೆ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಹಾಗೂ ರೈತರನ್ನು ಬಲಿಷ್ಠಗೊಳಿಸುವಲ್ಲಿ ಸನ್ನದ್ಧವಾಗಿದೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಮುಖ್ಯಮಂತ್ರಿಯವರ ಮೊದಲ ಯೋಜನೆ ರೈತ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾನಿಧಿ ಯೋಜನೆ ಜಾರಿಗಾಗಿ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಕುಮಾರಿ ಶೋಭ ಕರಂದ್ಲಾಜೆ ಅವರು ಮಾತನಾಡಿ ಭೂಮಿಯ ಫಲವತ್ತತೆ ಹಾಗೂ ನೀರಿನಾಂಶ ಹೆಚ್ಚಿಸಲು ವಿಶ್ವಬ್ಯಾಂಕ್ ಅಡಿಯಲ್ಲಿ ಕೇಂದ್ರ ಹೊಸ ಯೋಜನೆಗಳ ಜಾರಿಗೆ ಮುಂದಾಗಿದೆ, ಬರಗಾಲವನ್ನು ಹೊಡೆದೋಡಿಸಲು ಈ ರಿವಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದೆ, ದೇಶದಲ್ಲಿ ಒಣ ಬೇಸಾಯದ ಭೂಮಿ ಜಾಸ್ತಿ ಇದ್ದು, ರಾಜಸ್ತಾನ ಮೊದಲ ಸ್ಥಾನದಲ್ಲಿದ್ದರೆ ನಮ್ಮ ರಾಜ್ಯ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಕೃಷಿ ನಾಶವಾದಲ್ಲಿ ನಾಡಿಗೆ ದುಭಿಕ್ಷೆ ಎಂಬ ನಾಣ್ಣುಡಿ ಇದೆ, ಕೃಷಿ ಸಮೃದ್ಧವಾಗಿದ್ದಲ್ಲಿ ಆ ನಾಡು ಸಮೃದ್ಧವಾಗಿರುತ್ತದೆ, ಮಣ್ಣಿನ ಉಳಿವಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ, 500 ರಿಂದ 700 ವರ್ಷಗಳು ಒಂದು ಇಂಚು ಮಣ್ಣಿನ ಸೃಷ್ಟಿಗೆ ಬೇಕಾಗುತ್ತದೆ. ಅಂತಹ ಅಮೂಲ್ಯ ಮಣ್ಣನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಕೃಷಿ ಇಲಾಖೆ ವತಿಯಿಂದ ಇಂದು 100 ಸಂಚಾರಿ ಮಣ್ಣು ಪರೀಕ್ಷಾ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ, ಭವಿಷ್ಯದಲ್ಲಿ ತಾಲ್ಲೂಕಿಗೊಂದು ವಾಹನವನ್ನು ನೀಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ರೈತ ಉತ್ಪಾದಕ ಸಂಸ್ಥೆಗಳಿಗೆ, ರೈತ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಎಫ್‍ಪಿಓಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು, ಈ ಕಾರ್ಯಕ್ರಮ ರಾಷ್ಟ್ರಮಟ್ಟದ ಕಾರ್ಯಮವಾಗಿದ್ದು ದೇಶದ 12 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಸೇರಿದಂತೆ ಅನೇಕ ಉನ್ನತಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಮತ್ತು ಕೃಷಿ ವಿವಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here