ಕಲಬುರಗಿ: ಲಾಕ್‌ಡೌನ್ ಸಂದರ್ಭದಲ್ಲಿ ಮನೆಯ ಮುಂದೆ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದಾಗ, ರನ್ ಮಾಡಲು ಹೋದಾಗ ಬ್ಯಾಟ್ ಅಡ್ಡ ಬಂದು ಕಾಲಿನ ಪ್ರಭಲವಾದ ಮೂಳೆ ಮುರಿತಕ್ಕೊಳಗಾಗಿ, ಸುಮಾರು ನಾಲ್ಕು ತಿಂಗಳ ಕಾಲ ಬೆಡ್ ಮೇಲೆ ಇದ್ದು, ಅತ್ತ ಮನೆಪಾಠಕ್ಕೂ ಹೋಗದೆ, ಇತ್ತ ಆನ್‌ಲೈನ್ ಪಾಠ ಕೇಳಲೂ ಆಗದೆ ತೀವ್ರವಾಗಿ ನೊಂದು, ಮಾನಸಿಕವಾಗಿ ಜರ್ಜಿತವಾಗಿದ್ದರೂ, ಮನೆಯಲ್ಲಿನ ಸಹೋದರ, ಶಿಕ್ಷಕರ ಉತ್ತಮ ಮಾರ್ಗದರ್ಶನ, ಛಲದ ಅಭ್ಯಾಸ ಮಾಡಿ, ಪರೀಕ್ಷೆ ಎದುರಿಸಿ ಶೇ,೮೫ ಅಂಕಗಳೊಂದಿಗೆ ಉತ್ತಿರ್ಣನಾದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಇಂದು ಶುಕ್ರವಾರ ಫೋನ್ ಮಾಡಿ, ಅಭಿನಂದಿಸಿ, ಪ್ರೋತ್ಸಾಹಿಸಿದ್ದಾರೆ.
ಕಲಬುರಗಿಯ ತಿಲಕನಗರದ ವಾಣಿ ವಿಲಾಸ್ ಪಬ್ಲಿಕ್ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿ ಪ್ರಶಾಂತ ಬಣಗಾರನ ಬಗ್ಗೆ ಮಾಹಿತಿ ಪಡೆದ ಸಚಿವರು, ಇಂದು ಮಧ್ಯಾಹ್ನ ಫೋನ್ ಮಾಡಿ, `ಪ್ರಶಾಂತ್ ಕಂಗ್ರಾಟ್ಸ್, ೮೫ರಷ್ಟು ಅಂಕ ಪಡೆದಿದಿಯಾ, ಈಗ ಹುಷಾರಾಗಿದ್ದಿಯಾ, ಓಡಾಡಕ್ಕೆ ಶುರ ಮಾಡಿದಿಯಾ, ಪಿಯುಸಿ ಏನ್ ಮಾಡಬೇಕೆಂದಿಯಾ, ಸೈನ್ಸಾ. ಸರಿ ಕಣೋ, ಒಳ್ಳೆಯದು ಕಣೋ, ಚೆನ್ನಾಗಿ ಓದು’, ಎಂಬ ಸಚಿವರ ಮಾತುಗಳು ವಿದ್ಯಾರ್ಥಿಗೆ ಎಲ್ಲಿಲದ ಖುಷಿ ತಂದಿತ್ತು.
ಕಳೆದ ಶೈಕ್ಷಣಿಕ ವರ್ಷದ ಆರಂಭದ ದಿನಗಳಲ್ಲಿ ಕೊರೊನಾದಿಂದಾಗಿ ಮೊದಲಿಗೆ ಆನ್‌ಲೈನ್ ಪಾಠಗಳು ನಡೆದಿದ್ದವು. ಕೊರೊನಾ ಆರ್ಭಟ ಕಡಿಮೆ ಆದ ನಂತರ ಕೊರೊನಾ ನಿಯಮ ಪಾಲನೆಯೊಂದಿಗೆ ಶಾಲೆಗಳು ಆರಂಭಿಸಲಾಗಿತ್ತು. ಆದರೂ ಪರೀಕ್ಷೆಗಳು ನಡೆಯುತ್ತವೋ ಇಲ್ಲವೋ, ನಡೆದರೂ ಯಾವ ರೀತಿಯಾಗಿ ನಡೆಯುತ್ತವೆ ಎಂಬ ಕುತೂಹಲ, ಭಯ ವಿದ್ಯಾರ್ಥಿಗಳಲ್ಲಿ ಮನೆ ಮಾಡಿತ್ತು.
ಆದರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತರಗತಿಗಳಿಗೆ, ಅವರ ಪಾಠಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹಾಗೂ ಅವರಲ್ಲಿ ಅಡಗಿದ್ದ ಭಯವನ್ನು ಹೋಗಲಾಡಿಸಿ, ಎರಡು-ಮೂರು ಅಂಕಗಳಲ್ಲಿ ಪಾಸ್ ಆಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳಿಗೆ ೧೦ರವರೆಗೆ ಕೃಪಾಂಕ ನೀಡಿ, ಪರೀಕ್ಷೆಯನ್ನು ಸುಲಿತವಾಗಿ ನಡೆಯುವಂತೆ, ಹಾಗೂ ಕಳೆದ ಹತ್ತು ವರ್ಷಗಳಲ್ಲಿಯೇ ಉತ್ತಮ ಫಲಿತಾಂಶ ಬರುವಂತೆ, ಮಾತ್ರವಲ್ಲದೆ ತಾವು ಪ್ರವಾಸ ಮಾಡುವಾಗ ದೊರೆಯುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಫೋನ್ ಮಾಡುತ್ತಾ ಅವರಿಗೆ ಪ್ರೋತ್ಸಾಹ ತುಂಬುತ್ತಿರುವ ಸಚಿವರ ಕಾರ್ಯ ವೈಖರಿ ಪ್ರಶಂಸೆಗೆ ಪಾತ್ರವಾಗಿದೆ.