ಬೀದರ್: ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಜನಪದ ಅಕ್ಯಾಡೆಮಿ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಅಧ್ಯಕ್ಷ ನಿರ್ಮಲ್ ರತನ್‌ಲಾಲ್ ವೈದ್ಯ ಅವರು ಇಲ್ಲಿ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ಜನಪದ ಅಕ್ಯಾಡೆಮಿ ಸ್ಥಾಪನೆ ಮಾಡುವುದು ಜೊತೆಗೆ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಂತ್ರಾಲಯದ ಮೂಲಕ ದೇಶದಲ್ಲಿರುವ ಜನಪದ ಬುಡಕಟ್ಟು ಕಲಾವಿದರಿಗೆ ಜನಪದ ಗುಡಿ ಕೈಗಾರಿಕೆ ಸ್ವಯಂ ಉದ್ಯೋಗ ವಿಶೇಷ ತರಬೇತಿಯನ್ನು ರೂಪಿಸಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಕೇಂದ್ರ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ ಅವರಿಗೆ ಒತ್ತಾಯಿಸಿದರು.
ದೇಶದಲ್ಲಿ ಕಲಾವಿದರು ಕೇವಲ ಸರ್ಕಾರದಿಂದ ರೂ. ೮೦೦ ಮಾತ್ರ ಸಂಭಾವನೆ ಪಡೆಯುತ್ತಿದ್ದಾರೆ. ಇದರಿಂದ ಕಲಾವಿದರು ತಮ್ಮ ಕಲೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಧುನಿಕ ಕಲೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ನಮ್ಮ ದೇಶದ ಕಲೆ ಸಾಹಿತ್ಯ ಮತ್ತು ನೆಲಮೂಲದ ಸಂಸ್ಕೃತಿ ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ತಕ್ಕ ಅನುದಾನ ಮತ್ತು ಪ್ರೋತ್ಸಾಹ ಇಲ್ಲದಂತಾಗಿದೆ. ಇದರಿಂದ ಕಲಾವಿದರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಚಿವ ಸಾರಂಗಿಯವರು ಮೂಲತಃ ಬಡತನದಿಂದ ಬೆಳೆದು ಬಂದಿದವರಾಗಿದ್ದು, ಕಲಾವಿದರ ಸಮಸ್ಯೆಗಳೇನು? ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಕಲಾವಿದರ ಬದುಕು ನಿಮ್ಮ ಕೈಯಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಆಧೀನದಲ್ಲಿ ಸುಮಾರು ೩ ಸಾವಿರ ನೊಂದಾಯಿತ ಕಲಾ ಗುಂಪುಗಳು ನಿರಂತರವಾಗಿ ದೇಶದ ಪ್ರತಿಯೊಂದು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿವೆ. ಸುಮಾರು ೩ ಲಕ್ಷಕ್ಕೂ ಅಧಿಕ ಕಲಾವಿದರು ಸೇವೆ ಸಲ್ಲಿಸುತ್ತಿದ್ದು, ಇವರೆಲ್ಲರ ಜೀವನ ಉಜ್ವಲಗೊಳಿಸಬೇಕಾದರೆ ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ಜನಪದ ಅಕ್ಯಾಡೆಮಿ ಸ್ಥಾಪನೆಯಾಗಬೇಕು. ತನ್ಮೂಲಕ ಕಲಾವಿದರಿಗೆ ಅನುಕೂಲ ಒದಗಿಸಿಕೊಡಬೇಕೆಂದು ಕೇಂದ್ರ ಸಚಿವ ಸಾರಂಗಿಯವರಿಗೆ ದೆಹಲಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ನಿಯೋಗದಲ್ಲಿ ಪರಿಷತ್ತಿನ ಉಪಾಧ್ಯಕ್ಷ ಮಾಂಗಿಲಾಲ್ ಶರ್ಮಾ, ಪಂಜಾಬ್ ರಾಜ್ಯದ ಪ್ರತಿನಿಧಿ ಜಿತ್‌ಸಿಂಗ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜಕುಮಾರ್ ಹೆಬ್ಬಾಳೆ ಮತ್ತು ಪ್ರಧಾನ ಕಾರ್ಯದರ್ಶಿ ಹಾಸನ್ ರಘು ಅವರು ಉಪಸ್ಥಿತರಿದ್ದರು.