ಜಿಲ್ಲೆಯ ಮಕ್ಕಳಲ್ಲಿ ಸಾಹಿತ್ಯದ ಅರಿವು ಮೂಡಿಸಿದಲ್ಲಿ ಉತ್ತಮ ಸಮಾಜ ನಿರ್ಮಿಸಬಹುದು. ಅದಕ್ಕಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿವಿಧ ಪ್ರಕಾರದ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದಕ್ಕೆ ತಯ್ಯಾರಿ ಮಾಡಿಕೊಳ್ಳಲಾಗುತ್ತಿದೆ. – ಶಿವರಾಜ ಎಸ್.ಅಂಡಗಿ, ಗೌರವ ಕಾರ್ಯದರ್ಶಿ, ಜಿಲ್ಲಾ ಕಸಾಪ
ಕಲಬುರಗಿ: ಮಕ್ಕಳ ಪ್ರತಿಭಾ ಅನಾವರಣಕ್ಕೆ ಅವಕಾಶ ಕೊಡುವ ಉದ್ದೇಶದಿಂದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜೂನ್ ಮಾಸಾಂತ್ಯದಲ್ಲಿ ಒಂದು ದಿನದ ‘ಮಕ್ಕಳ ಪ್ರತಿಭಾ ಸಮ್ಮೇಳನ’ ವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಮ್ಮ ಭಾಗದ ಮಕ್ಕಳಲ್ಲಿ ಪ್ರತಿಭೆಗೆ ಬರವಿಲ್ಲ. ಅವರ ಆಸಕ್ತಿಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ನೀಡಿದಾಗ ಮಾತ್ರ ಅವರಲ್ಲಿನ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ. ಜತೆಗೆ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಗೌರವ ಕೊಡುವುದರಿಂದ ಅವರಲ್ಲಿನ ಪ್ರತಿಭೆಗೆ ಹೆಚ್ಚಿನ ಸಾಧನೆಗೆ ಪ್ರೇರಣೆ ನೀಡಲು ಇಂಥ ಕಾರ್ಯಕ್ರಮದ ಮೂಲಕ ಕೊಟ್ಟಂತಾಗುತ್ತದೆ.
ಕಲೆ, ಆಸಕ್ತಿಗೆ ವಯಸ್ಸಿನ ನಿರ್ಬಂಧವಿಲ್ಲ. ಆದರೆ ಕಲಿಯಬೇಕು ಎನ್ನುವ ತುಡಿತವೊಂದಿದ್ದರೆ ಸಾಕು ಅದು ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಇಂಥ ಅನೇಕ ಮಕ್ಕಳನ್ನು ಸಾಧನೆಯ ಹಾದಿಯಲ್ಲಿ ನಡೆಸಲು ಪೂರಕವಾಗುವಂತೆ ಈ ‘ಮಕ್ಕಳ ಪ್ರತಿಭಾ ಸಮ್ಮೇಳನ’ವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಇಂಥ ಸಮ್ಮೇಳನಗಳು ಏರ್ಪಡಿಸುವುದರಿಂದ ಮಕ್ಕಳ ದೈಹಿಕ, ಮಾನಸಿಕ ವಿಕಸನದ ಜತೆಗೆ ಶೈಕ್ಷಣಿಕ ಪ್ರಗತಿಯೂ ಸಾಧ್ಯವಾಗಲಿದೆ. ಬರೀ ಅಂಕಗಳನ್ನು ಪಡೆದರೆ ಸಾಲದು, ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ ಎಂದು ತೇಗಲತಿಪ್ಪಿ ತಿಳಿಸಿದ್ದಾರೆ.