ವಾಡಿ: ಪಹಣಿ ದೋಷ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ಹಳಕರ್ಟಿ ಗ್ರಾಮದ ರೈತರು ಮೇ.೨೭ ರಂದು ಬೆಳಗ್ಗೆ ೧೦:೦೦ ಗಂಟೆಗೆ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ-೧೫೦ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ.
ಕಳೆದ ಎರಡು ದಶಕಗಳಿಂದ ಹಳಕರ್ಟಿ ಗ್ರಾಮದ ರೈತರು ಪಹಣಿ ದೋಷ ಸರಿಪಡಿಸಲು ವಿವಿಧ ಹಂತದ ಹೋರಾಟ ನಡೆಸಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ನಡೆಸಿದ ಕೊಂಚೂರು ಗ್ರಾಮ ವಾಸ್ತವ್ಯ ಸಂದರ್ಭದಲ್ಲೂ ೬೫೦ ಸರ್ವೇ ನಂಬರ್ ಕ್ರಮಬದ್ಧವಾಗಿಲ್ಲದ್ದನ್ನು ಮತ್ತು ಇದರಿಂದಾಗುತ್ತಿರುವ ಸಮಸ್ಯೆಗಳನ್ನು ವಿವರಿಸಲಾಗಿತ್ತು.
ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಿ ಟಿಪ್ಪಣಿ ಮುಕ್ತ ಗ್ರಾಮ ಎಂದು ಘೋಷಿಸಲಾಗುವುದು ಎಂದು ಡಿಸಿ ಭರವಸೆ ನೀಡಿದ್ದರು. ಮೂರು ತಿಂಗಳು ಕಳೆದರೂ ಒಂದೇಯೊಂದು ಪಹಣಿ ದೋಷಮುಕ್ತವಾಗಿಲ್ಲ. ಪರಿಣಾಮ ರೈತರು ರೊಚ್ಚಿಗೆದ್ದಿದ್ದಾರೆ. ನೂರಾರು ರೈತರು ಹೆದ್ದಾರಿ ಮೇಲೆ ಕುಳಿತು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ಎಐಕೆಕೆಎಂಎಸ್ ಸಂಘಟನೆಯ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ, ಗ್ರಾಮ ಸಮಿತಿ ಅಧ್ಯಕ್ಷ ಚೌಡಪ್ಪ ಗಂಜಿ ತಿಳಿಸಿದ್ದಾರೆ.