ಶಹಾಬಾದ: ಶಾಲಾ ದಾಖಲಾತಿ ಪಡೆಯಲು ನೂಕುನುಗ್ಗಲೂ, ಪ್ರವೇಶಾತಿ ಪಡೆಯಲು ರಾಜಕೀಯ ನಾಯಕರಿಂದ ಶಿಫಾರಸ್ಸು, ನಿರೀಕ್ಷೆಗೂ ಮೀರಿ ಪ್ರವೇಶಾತಿ ಪಡೆಯಲು ಹಾಕಿದ ಅರ್ಜಿಗಳು ಸೇರಿದಂತೆ ಪೋಷಕರ ಹರಸಾಹಸ ನಡುವೆ ಎಲ್ಲಾ ಒತ್ತಡಗಳಿಗೆ ಮಣಿಯದೇ ಇಲ್ಲಿನ ಮುಖ್ಯಗುರುಗಳಾದ ಶಿವಪುತ್ರಪ್ಪ ಕೋಣಿನ್ ಪಾರದರ್ಶಕವಾಗಿ ಪೋಷಕರ ಮುಂದೆಯೇ ಲಾಟರಿ ಮೂಲಕ ಪ್ರವೇಶಾತಿ ನೀಡುವ ಕೆಲವನ್ನು ಮಾಡಿ ಬೇಷ್ ಎನಿಸಿಕೊಂಡಿದ್ದಾರೆ.
ಹೌದು.ಇದು ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದೃಶ್ಯ.ಅಲ್ಲದೇ ಈ ಶಾಲೆಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಕೋವಿಡ್‌ನಿಂದ ಸಾಕಷ್ಟು ತೊಂದರೆಗೆ ಒಳಗಾದ ಜನರು ತಮ್ಮ ಮಕ್ಕಳನ್ನು ಲಕ್ಷಾಂತರ ಡೋನೆಷನ್ ನೀಡಲಾಗದೇ ಸರಕಾರಿ ಶಾಲೆಯಲ್ಲಿ ಕಳೆದ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿಗಳು ಪ್ರಾರಂಭವಾಗಿದ್ದು, ಪ್ರಸಕ್ತ ವರ್ಷ ಪ್ರವೇಶಾತಿ ಪಡೆಯಲು ಮುಗಿಬಿದ್ದ ಕ್ಷಣ ಮಾತ್ರ ಕುತೂಹಲದಿಂದ ಕೂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸ್ಥಳೀಯ ನಿವಾಸಿ ರಮೇಶ ಹಾಗೂ ಹೆಂಡತಿ ತನ್ನ ಮಗಳಾದ ಭೂಮಿಕಾಳ ಪ್ರವೇಶಾತಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆರ್ಥಿಕ ತೊಂದರೆಗೆ ಒಳಗಾಗಿ ರಮೇಶ ದಂಪತಿಗಳು ದುಡಿಯಲು ಬೆಂಗಳೂರಿಗೆ ಹೋಗಿದ್ದರು.ಅವರ ಮಗಳಾದ ಭೂಮಿಕಾ ಪ್ರವೇಶಾತಿ ಲಕ್ಕಿ ಡ್ರಾ ಇರುವುದರಿಂದ ಬೆಂಗಳೂರಿನಿಂದ ಶಹಾಬಾದವರೆಗೆ ರಾತ್ರಿ ಮತ್ತು ಹಗಲು ಬೈಕ್ ನಡೆಸಿ ಶಾಲೆಗೆ ಬಂದಿದ್ದಾರೆ.ಆದರೆ ಅವರಿಗೆ ಪ್ರವೇಶಾತಿ ಮಾತ್ರ ಸಿಗಲಿಲ್ಲ ಎಂಬುದೇ ದುಃಖಕರ ಸಂಗತಿ.
ಸರಕಾರದ ಯೋಜನೆ ಹಾಗೂ ಕಳೆದ ವರ್ಷ ಇಂಗ್ಲೀಷ ಬೋಧನೆ ಮಾಡಿದ ಇಲ್ಲಿನ ಶಿಕ್ಷಕಿ ಅಂಜನಾ ದೇಶಪಾಂಡೆ ಒಂದನೇ ತರಗತಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಉತ್ತಮವಾಗಿ ತಯ್ಯಾರು ಮಾಡಿದ್ದಾರೆ.ಅಲ್ಲದೇ ಮುಖ್ಯಗುರುಗಳ ಹಾಗೂ ಶಿಕ್ಷಕರ ಪ್ರಯತ್ನಕ್ಕೆ ತಾಲೂಕಿನಲ್ಲಿ ಪೋಷಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಕಳೆದ ವರ್ಷ ಒಂದನೇ ತರಗತಿ ಆರಂಭಿಸಿ ೩೦ ಮಕ್ಕಳ ಪ್ರವೇಶಾತಿ ಪಡೆಯಲಾಗಿತ್ತು.ಪ್ರಸಕ್ತ ವರ್ಷ ಒಂದನೇ ತರಗತಿ ಮಕ್ಕಳಿಗೆ ೩೦ ಪ್ರವೇಶಾತಿ ತೆಗೆದುಕೊಳ್ಳಲು ಮಾತ್ರ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿತ್ತು.ಆದರೆ ೩೦ ಪ್ರವೇಶಾತಿಗಳಿಗೆ ೧೦೦ ಅರ್ಜಿಗಳನ್ನು ಪಾಲಕ ವರ್ಗದವರು ತೆಗೆದುಕೊಂಡು ಹೋಗಿದ್ದರು. ಅದರಲ್ಲಿ ಸುಮಾರು ೭೫ ಅರ್ಜಿಗಳು ಮಾತ್ರ ಪೋಷಕರು ಸಲ್ಲಿಸಿದ್ದರು.
ಆದರೆ ಆಶ್ಚರ್ಯದ ಸಂಗತಿ ಏನೆಂದರೆ ೭೫ ಅರ್ಜಿಗಳಲ್ಲಿ ೩೦ ಪ್ರವೇಶಾತಿ ನೀಡುವುದು ಹೇಗೆ ಎಂಬ ಸಂಕಟವನ್ನು ತಂದೊಡ್ಡಿತ್ತು.ಅದಕ್ಕೆ ಉತ್ತರ ಎಂಬಂತೆ ಸರಕಾರಿ ಆದೇಶವನ್ನು ಪಾಲಿಸುವ ಮೂಲಕ ಮುಖ್ಯಗುರುಗಳು ಯಾರಿಗೂ ಗುರಿಯಾಗದೇ ಲಾಟರಿ ಮೂಲಕ ಪ್ರವೇಶಾತಿ ನೀಡಲು ಮುಂದಾದಾಗ ಪೋಷಕರಲ್ಲಿ ಒಂದು ರೀತಿಯಲ್ಲಿ ಅಚ್ಚರಿಗೆ ಕಾರಣವಾಯಿತು.
ಸ್ಥಳೀಯ ಪೋಷಕರ, ಜನಪ್ರತಿನಿಧಿಗಳ, ಇಲಾಖೆಯ ಅಧಿಕಾರಿಗಳ ಸಲಹೆ ಮೂಲಕ ದಿನಾಂಕವನ್ನು ನಿಗದಿಪಡಿಸಿ ಮಕ್ಕಳು ಹಾಗೂ ಪೋಷಕರಿಂದಲೇ ಎಲ್ಲರ ಸಮ್ಮುಖದಲ್ಲಿ ಚೀಟಿಯನ್ನು ಎತ್ತಿಸಿ ಲಕ್ಕಿ ಡ್ರಾ ನಡೆಸಿದರು.ಲಕ್ಕಿ ಡ್ರಾನಲ್ಲಿ ಆಯ್ಕೆಯಾದವರನ್ನು ೧೫ ಸ್ಥಾನ ಮೀಸಲಾತಿಗೆ (ಎಸ್ಸಿ, ಎಸ್ಟಿ, ೨ಎ, ೩ಬಿ, ಪ್ರ೧, ಅಲ್ಪಸಂಖ್ಯಾತ) ಇನ್ನುಳಿದ ೧೫ ಸ್ಥಾನ ಸಾಮಾನ್ಯ ವರ್ಗಕ್ಕೆ ವಿಂಗಡಿಸಿ ೩೦ ಮಕ್ಕಳಿಗೆ ಪ್ರವೇಶಾತಿ ನೀಡಲಾಯಿತು. ಲಕ್ಕಿ ಡ್ರಾನಲ್ಲಿ ಬರದ ಅರ್ಜಿ ಹಾಕಿದ ಇನ್ನುಳಿದ ೪೫ ವಿದ್ಯಾರ್ಥಿಗಳು ಮತ್ತು ಪಾಲಕರು ನಿರಾಸೆಯಿಂದ ಹೊರನಡೆದರು.
ಮಕ್ಕಳು ಮತ್ತು ಪೋಷಕರನ್ನು ಸರಕಾರಿ ಶಾಲೆಗಳಿಗೆ ಆಕರ್ಷಿಸಲು ಮತ್ತು ಶಾಲೆಗಳ ಬಲವರ್ಧನೆಗೆ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಬಿಸಿರುವುಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಬಡವರ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಿದೆ.ಅಲ್ಲದೇ ತಾಲೂಕಿನಲ್ಲಿಯೇ ಆಂಗ್ಲ ಮಾಧ್ಯಮ ಕಳೆದ ವರ್ಷದಿಂದ ಪ್ರಾರಂಭವಾದ ಏಕೈಕ್ ಶಾಲೆ ಎಂದು ಹೆಗ್ಗಳಿಯೂ ಪಡೆದಿದೆ.ಕಲ್ಯಾಣ ಕರ್ನಾಟಕದಲ್ಲಿಯೇವಿಶಿಷ್ಟವಾದ ಈ ಶಾಲೆಗೆ ಶಿಕ್ಷಕರ ಕೊರತೆಯನ್ನು ಸರಿತೂಗಿಸಿದರೇ ಹಂತ ಹಂತವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಅಲ್ಲದೇ ಸರಕಾರ ಕೈಗೊಂಡಿರುವ ಇಂತಹ ವಿನೂತನ ಕಾರ್ಯಕ್ರಮಗಳಿಗೆ ಶಿಕ್ಷಕರು ಕೈಜೋಡಿಸಿದರೇ ಶಾಲೆಯ ಸ್ವರೂಪವನ್ನೇ ಬದಲಾವಣೆ ಮಾಡಬಹುದು ಎನ್ನುವುದಕ್ಕೆ ಈ ಶಾಲೆಯೇ ನಿದರ್ಶನ.
ಈ ಲಕ್ಕಿ ಡ್ರಾ ಸಂದರ್ಭದಲ್ಲಿ ಸಿಆರ್‌ಸಿ ಸತ್ಯನಾರಾಯಣ, ನಗರ ಸಭೆಯ ಸದಸ್ಯೆ ಸಾಬೇರಾ ಬೇಗಂ, ಶಿಕ್ಷಕ ಸಂತೋ? ಸಲಗರ, ಕಸಾಪ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಮಲ್ಲಣ್ಣ ಮುದ್ದಾ, ರವೀಂದ್ರ ಬೆಳಮಗಿ, ಈರಮ್ಮ ಕಂಬಾನೂರ್ ಮತ್ತು ನೂರಾರು ಪಾಲಕ ಪೋ?ಕರು ಮಕ್ಕಳು ಉಪಸ್ಥಿತರಿದ್ದರು.
ಕಳೆದ ವರ್ಷ ಪ್ರಾರಂಭವಾದ ಆಂಗ್ಲ ಮಾಧ್ಯಮ ೧ನೇ ತರಗತಿಗೆ ೩೦ ಪ್ರವೇಶಾತಿ ತೆಗದುಕೊಂಡಿದ್ದು, ಪ್ರಸಕ್ತ ವರ್ಷವೂ ಲಾಟರಿ ಮೂಲಕ ೩೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದೆವೆ. ಕಳೆದ ವರ್ಷದ ಮಕ್ಕಳು ಎರಡನೇ ತರಗತಿಗೆ ಬಂದಿದ್ದಾರೆ. ತರಗತಿಗಳು ಹೆಚ್ಚಾಗಿವೆ. ಕೋಣೆಯನ್ನು ಹೇಗಾದರೂ ಸರಿದೂಗಿಸಬಹುದು.ಆದರೆ ಶಿಕ್ಷಕರ ಕೊರತೆಯನ್ನು ಇಲಾಖೆಯೇ ತುಂಬಬೇಕು. ಆಗ ಮಾತ್ರ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಲು ಸಾಧ್ಯ – ಶಿವಪುತ್ರಪ್ಪ ಕೋಣಿನ್ ಮುಖ್ಯಗುರುಗಳು.
ಪ್ರಸಕ್ತ ವರ್ಷ ೧ನೇ ತರಗತಿಗೆ ೩೦ ಪ್ರವೇಶಾತಿಗಳಿದ್ದು, ಸುಮಾರು ೭೫ ಅರ್ಜಿಗಳು ಸ್ವೀಕೃತವಾಗಿವೆ.ಅದಕ್ಕಾಗಿ ಪೋಷಕರ ಮುಂದೆಯೇ ಲಾಟರಿ ಮೂಲಕ ಪೋಷಕರಿಂದಲೇ ಚೀಟಿ ಎತ್ತಿಸಿದ್ದಾರೆ.ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಿದ್ದಾರೆ.ಅಲ್ಲದೇ ಶಾಲೆಗೆ ಶಿಕ್ಷಕರ ಕೊರತೆಯಿದೆ ಎಂದು ತಿಳಿದು ಬಂದಿದ್ದು, ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಶಿಕ್ಷಣಾಧಿಕಾರಿಗಳ ಜತೆ ಮಾತನಾಡಿ ಶಿಕ್ಷಕರ ನಿಯೋಜನೆ ಮಾಡಿಸುತ್ತೆನೆ- ಬಸವರಾಜ ಮತ್ತಿಮಡು ಶಾಸಕರು.