ಕಲಬುರಗಿ: ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ (42) ಎಂಬುವವರನ್ನು ದುಷ್ಕರ್ಮಿಗಳು ತಲ್ವಾರ್‌ನಿಂದ ಇರಿದು ಸೋಮವಾರ ಮಧ್ಯಾಹ್ನ ಹತ್ಯೆ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಅವರ ಸಣ್ಣ ಸತೀಶ ಕಂಬಾನೂರ ಅವರನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಗಿರೀಶ ಅವರ ಪತ್ನಿ ಅಂಜಲಿ ಕಂಬಾನೂರ ಅವರು ಪ್ರಸ್ತುತ ಶಹಾಬಾದ್ ನಗರಸಭೆ ಅಧ್ಯಕ್ಷೆಯಾಗಿದ್ದಾರೆ.
ಶಹಾಬಾದ್ ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದ ಗಿರೀಶ ಅವರನ್ನು ಹುಡುಕಿಕೊಂಡು ಬಂದ ದುಷ್ಕರ್ಮಿಗಳು ತಕ್ಷಣವೇ ತಲ್ವಾರ್‌ನಿಂದ ಹತ್ತಾರು ಕಡೆ ಇರಿದು ಪರಾರಿಯಾದರು. ಘಟನೆಗೆ ಬಳಸಿದ ಎರಡು ತಲ್ವಾರ್‌ಗಳ ಪೈಕಿ ಒಂದು ಹೊಟ್ಟೆಯಲ್ಲೇ ಸಿಲುಕಿಕೊಂಡಿತ್ತು.
ತಕ್ಷಣ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅದಾಗಲೇ ಕೊನೆಯುಸಿರೆಳೆದಿದ್ದರು.
ಜೀವ ಉಳಿಸದ ಪಿಸ್ತೂಲ್: ಗಿರೀಶ ಅವರಿಗೆ ಜೀವ ಬೆದರಿಕೆ ಇರುವುದು ಗೊತ್ತಿತ್ತು. ಹೀಗಾಗಿ, ಇತ್ತೀಚಿನವರೆಗೂ ಇಬ್ಬರು ಖಾಸಗಿ ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡಿದ್ದರು. ಇತ್ತೀಚೆಗೆ ಪಿಸ್ತೂಲ್ ಇಟ್ಟುಕೊಳ್ಳಲು ಪರವಾನಗಿ ಸಿಕ್ಕಿದ್ದರಿಂದ ಗನ್‌ಮ್ಯಾನ್‌ಗಳನ್ನು ಕೆಲಸದಿಂದ ಬಿಡಿಸಿದ್ದರು. ಪಿಸ್ತೂಲ್ ತಮ್ಮ ಬಳಿ ಇರಿಸಿಕೊಳ್ಳುತ್ತಿದ್ದರು. ತಲ್ವಾರ್ ಹಿಡಿದು ಬಂದ ದುಷ್ಕರ್ಮಿಗಳು ಪಿಸ್ತೂಲ್ ತೆಗೆಯಲೂ ಅವಕಾಶ ಕೊಡದೇ ಹಲ್ಲೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.