ಮೈಸೂರು: ಸತತ ಐದು ವರ್ಷಗಳಿಂದ ಮೈಸೂರು ನಗರದ ಕೋಟೆಹುಂಡಿ ಗ್ರಾಮದಲ್ಲಿ ಜಾಕೀರ್ ಹುಸೇನ್ ಮತ್ತು ಮಮತಾ ದಂಪತಿಗಳು ವರಮಹಾಲಕ್ಷ್ಮಿ, ಬಕ್ರೀದ್, ದೀಪಾವಳಿ, ರಂಜಾನ್ ಹಬ್ಬಗಳನ್ನು ಆಯಾ ಧಾರ್ಮಿಕ ನಂಬಿಕೆ ಅನುಸಾರವಾಗಿ ವಿಧಿ ವಿಧಾನಗಳಿಂದ ಭಕ್ತಿ ಭಾವದಿಂದ ಆಚರಣೆ ಮಾಡುತ್ತಾ ಸಾಮರಸ್ಯದ ಬದುಕು ಸಾಗಿಸುತ್ತಿದ್ದಾರೆ.
ಜಾಕೀರ್ ಹುಸೇನ್ ಮೂಲತಃ ಮುಸ್ಲಿಮ್ ಜನಾಂಗಕ್ಕೆ ಸೇರಿದವರಾಗಿದ್ದು ಪ್ರಸ್ತುತ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರಾಗಿದ್ದು ಅವರ ಪತ್ನಿ ಮಮತಾ ಖಾಸಗೀ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ದಂಪತಿಗಳು ಎಂದಿನಂತೆ ಈ ಬಾರಿಯೂ ತಮ್ಮ ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಬಹಳ ಭಕ್ತಿ ಭಾವದಿಂದ ವರಮಹಾಲಕ್ಷ್ಮಿ ಪೂಜೆ ಮಾಡುವುದರೊಂದಿಗೆ ಅವರ ಬಂಧು ಮಿತ್ರರು ಹಾಗೂ ಸ್ಥಳೀಯ ಗೃಹಿಣಿಯರನ್ನು ಆಮಂತ್ರಿಸಿ ಔತಣಕೂಟ ಏರ್ಪಡಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ, ಕುಟುಂಬಸ್ಥರು ಸ್ಥಳೀಯ ಮುಖಂಡರು,ಗೃಹಿಣಿಯರು ಮಕ್ಕಳು ಭಾಗಿಯಾಗಿದ್ದರು.