ಕಲಬುರಗಿ: ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆ ಬಗ್ಗೆ ಕಲಬುರಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಭಾರತ ಸೇವಾದಳದ ಜಿಲ್ಲಾ ಘಟಕದಿಂದ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸೇವಾ ದಳದ ಜಿಲ್ಲಾ ಅಧ್ಯಕ್ಷರಾದ ಶಶೀಲ್ ನಮೋಶಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾರತ ಸೇವಾದಳದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ ಅವರು ಮಾತನಾಡಿ, ಮಕ್ಕಳಿಗೆ ಭಾರತ ಧ್ವಜದ ಬಗ್ಗೆ ಮಾಹಿತಿ, ರಾಷ್ಟ್ರ ಗೀತೆಯ ಬಗ್ಗೆ ಜಾಗೃತಿ ಸೇರಿದಂತೆ ಅನೇಕ ರಾಷ್ಟ್ರೀಯ ಭಾವೈಕ್ಯತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಸಮಿತಿಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಭಾರತ ಸೇವಾದಳದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಣ ಅವಂಟಿ ಅವರು, ಮುಂಬರುವ ದಿನಗಳಲ್ಲಿ ಕಲಬುರಗಿ ನಗರದಲ್ಲಿ ಸೇವಾದಳದ ಖಾಯಂ ಕಚೇರಿಯನ್ನು ಪ್ರಾರಂಭಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಸೇವಾದಳದ ಉಪಾಧ್ಯಕ್ಷರಾದ ಗೋವಿಂದ್ ಭಟ್ಟ, ಮಹಿಳಾ ಪ್ರತಿನಿಧಿ ಅಂಜನಾ ದೇಶಪಾಂಡೆ, ಸಿದ್ಧಾರ್ಥ ಬಸರಿಗಿಡ, ರಾಜು ದೊಡ್ಡಮನಿ, ಸೇವಾದಳದ ಜಿಲ್ಲಾ ಸಂಘಟಕಾರದ ಚಂದ್ರಶೇಖರ ಜಮಾದಾರ ಇದ್ದರು.