ಶಹಾಬಾದ:ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಕರಾದಸಂಸ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಶಹಾಬಾದ ತಾಲೂಕಾ ಕೇಂದ್ರವೆಂದ ಘೋಷಣೆಯಾಗಿ ಸುಮಾರು೫ ವರ್ಷಗಳು ಕಳೆದರೂ ಇಲ್ಲಿಯವರೆಗೆ ಪ್ರಮುಖ ತಾಲೂಕಾ ಕಚೇರಿಗಳು ಪ್ರಾರಂಭವಾಗಿಲ್ಲ.ಇದರಿಂದ ಇಲ್ಲಿನ ರೈತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಎಲ್ಲಿಲ್ಲ ತೊಂದರೆಯಾಗುತ್ತಿದೆ.ಪ್ರತಿಯೊಂದು ಕೆಲಸಕ್ಕೆ ಚಿತ್ತಾಪೂರ ತಾಲೂಕಿಗೆ ಹೋಗಬೇಕಾದ ಪರಿಸ್ಥಿತಿ ಇದೆ.ಹೇಳಿಕೊಳ್ಳಲು ತಾಲೂಕಾ ಆದರೆ ಯಾವುದೇ ಸೌಲಭ್ಯಗಳಿಲ್ಲ.ಆದ್ದರಿಂದ ತಾಲೂಕಾ ಕಚೇರಿಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು.
ಅಲ್ಲದೇ ನಗರದ ವಾಡಿ ವೃತ್ತದಿಂದ ಕನಕದಾಸ ವೃತ್ತ ಹಾಗೂ ತೊನಸನಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ.ಈಗಾಗಲೇ ರಸ್ತೆ ಹಳ್ಳಹಿಡಿದಿದೆ.ಆದರೂ ಬಸವೇಶ್ವರ ವೃತ್ತದಿಂದ ಕನಕದಾಸ ವೃತ್ತದವರೆಗಿನ ರಸ್ತೆಯಲ್ಲಿ ಸಂಪೂರ್ಣ ತಗ್ಗುಗಳು ಬಿದ್ದಿವೆ.ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.ಆದರೂ ಬಿಲ್ ಪಾವತಿ ಮಾಡಲಾಗಿದೆ ಎನ್ನಲಾಗುತ್ತಿದೆ.ಆದ್ದರಿಂದ ಈ ಬಗ್ಗೆ ತನಿಖೆ ಕೈಗೊಳ್ಳಬೇಕು. ನಗರದ ಎಸ್‌ಸಿ/ಎಸ್‌ಟಿ ಬಡಾವಣೆಗಳಲ್ಲಿ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಲಕ್ಷಾಂತರ ಅನುದಾನ ಹಣ ದುರ್ಬಳಕೆ ಮಾಡಲಾಗಿದೆ.ಅಲ್ಲಿ ಮಾಡಿರುವ ಎಲ್ಲಾ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ.ಪ್ರಗತಿ ಕಾಲೋನಿಯ ಮುಖ್ಯ ಉದ್ದೆಶಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ.
ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್‌ಸಿ/ಎಸ್‌ಟಿ ಬಡಾವಣೆಯಲ್ಲಿ ಕಾಮಗಾರಿಗಳನ್ನು ಮಾಡದೇ ಬೇರೆ ಬಡಾವಣೆಗಳಲ್ಲಿ ಕೆಲಸ ಮಾಡಿಸಿದ್ದಾರೆ.ಆದ್ದರಿಂದ ಎಸ್‌ಸಿ/ಎಸ್‌ಟಿ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕೆಂದು ಎಂದು ಒತ್ತಾಯಿಸಿದರು.ಅಲ್ಲದೇ ನಗರದಲ್ಲಿ ಸಾರ್ವಜನಿಕರಿಗೆ ಮೂತ್ರಾಲಯವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು.
ಕರಾದಸಂಸ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್, ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ತಾಲೂಕಾ ಸಂ.ಸಂಚಾಲಕರಾದ ತಿಪ್ಪಣ್ಣ ಧನ್ನೇಕರ್, ಮಹಾದೇವ ಮೇತ್ರೆ, ಹೋಬಳಿ ಸಂಚಾಲಕ ಲಕ್ಷ್ಣ ಕೊಲ್ಲೂರ್ ಇತರರು ಇದ್ದರು.