ವಾಡಿ(ಚಿತ್ತಾಪುರ): ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡುವುದಾಗಿ ಹೇಳಿದ್ದ ಅಚ್ಚೇದಿನಗಳು ಯಾರಿಗೂ ಬರಲಿಲ್ಲ. ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಂತಹ ಘೋರ ದಿನಗಳನ್ನು ಕಾಣುವಂತಾಗಿದೆ. ನಿರೀಕ್ಷೆ ಮಾಡಿರಲಾರದ ಇಂಥಹ ಒಳ್ಳೆಯದಿನಗಳು ನಮಗೆ ಬೇಡ. ನಿಮ್ಮ ಅಚ್ಚೆ ದಿನಗಳು ವಾಪಸ್ಸು ತೆಗೆದುಕೊಳ್ಳಿ ಎಂದು ಜನ ಚಳುವಳಿ ಭುಗಿಲೆದ್ದಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ಬಿಜೆಪಿ ಆಡಳಿತದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಚಿತ್ತಾಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಆವರು ಮಾತನಾಡಿದರು.
ಭಾರತದಲ್ಲಿ ಒಂದು ಸೂಜಿಸಹ ಉತ್ಪಾದನೆಯಾಗುತ್ತಿರಲಿಲ್ಲ. ಅಂತಹ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಕಂಪನಿಗಳ ಹುಟ್ಟಿಗೆ ಕಾರಣವಾಯಿತು. ನರೇಂದ್ರ ಮೋದಿ ಬಂದನಂತರ ಕಾರ್ಖಾನೆಗಳು ಬಂದವಾ? ಉದ್ಯೋಗ ಕ್ರಾಂತಿಯನ್ನೇ ಮಾಡುವುದಾಗಿ ಮೋದಿ ಹೈಳಿದರು. ಯಾರಿಗಾದರೂ ಉದ್ಯೋಗ ಸಿಕ್ಕಿದೆಯಾ? ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಕ್ಕಿ, ಗೋದಿ, ಹಾಲು, ಮೊಸರಿನ ಮೇಲೂ ಜಿಎಸ್ಟಿ ಹೇರಿಕೆ ಮಾಡಿ ಜನರ ಬದುಕು ಮಣ್ಣುಮಾಡಿದ್ದೇ ಮೋದಿ ಸಾಧನೆ. ಇದು ಬಿಜೆಪಿ ಸರ್ಕಾರದ ಘನಕಾರಿ ಯೋಜನೆ ಎಂದು ಹರಿಹಾಯ್ದರು. ಭ್ರಷ್ಟ ಬಿಜೆಪಿ ಸರ್ಕಾರದಿಂದ ಬೇಸತ್ತಿರುವ ರಾಜ್ಯದ ಜನತೆ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಕಾಂಗ್ರೆಸ್ ಪಕ್ಷ 2023ರ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಿಂದ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಪ್ರಿಯಾಂಕ್ ಖರ್ಗೆ, ಡಾ.ಅಜಯಸಿಂಗ್ ಮಾತನಾಡಿದರು. ಮಾಜಿ ಸಚಿವ ಬಾಬುರಾವ ಚವ್ಹಾಣ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಸೈಯದ್ ಮಹೆಮೂದ್ ಸಾಹೇಬ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಉಪಾಧ್ಯಕ್ಷ ಶೃತಿ ಪೂಜಾರಿ, ಸದಸ್ಯೆ ಶೀಲಾ ಕಾಶಿ, ಮುಖಂಡರಾದ ಸುಭಾಷ್ ರಾಠೋಡ, ವೀರಣ್ಣಗೌಡ ಪರಸರೆಡ್ಡಿ, ಟೋಪಣ್ಣ ಕೋಮಟೆ, ಮುಕ್ತಾರ ಪಟೇಲ, ಸೋಮಶೇಖರ್ ಗೋನಾಯಕ, ಜಗನ್ನಾಥ ಗೋದಿ, ಬಸವರಾಜ ಚಿನಮಳ್ಳಿ, ನಾಗರೆಡ್ಡಿ ಪಾಟೀಲ ಕರದಾಳ, ಬಸವರಾಜ ಪಾಟೀಲ ಹೇರೂರ, ಮಲ್ಲಿಕಾರ್ಜುನ ಪೂಜಾರಿ, ಸಿದ್ದುಗೌಡ ಅಫಜಲಪುರ, ಸುನಿಲ್ ದೊಡ್ಡಮನಿ ಸೇರಿದಂತೆ ಎರಡನೂರ ಸಾವಿರ ಕಾರ್ಯಕರ್ತರು ಪಾಲ್ಗೊಂಡಿದ್ದರು.