ಸುರಪುರ: ನಗರದ ಬಸ್ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬು ರಾಠೋಡ ಮತ್ತು ಸಂತೋಷಕುಮಾರ ಎಂಬ ಇಬ್ಬರು ನೌಕರರನ್ನು ಉದ್ದೇಶಪೂರ್ವಕವಾಗಿ ಅಂತರ ಜಿಲ್ಲಾ ಘಟಕಗಳಿಗೆ ವರ್ಗಾವಣೆ ಮಾಡಿದ್ದು,ಇದನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಗರದ ಬಸ್ ಡಿಪೋ ಮುಂದೆ ಸಾಮೂಹಿಕ ಸಂಘಟನೆಗಳಿಂದ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಧರಣಿ ನಿರತ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ,ಸುರಪುರ ಬಸ್ ಡಿಪೋದಲ್ಲಿ ಕೆಲ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಎದ್ದು ಕಾಣುತ್ತಿದೆ.ಇದನ್ನು ವಿರೋಧಿಸಿದವರ ಮೇಲೆ ವಿನಾಕಾರಣ ಕೇಸು ದಾಖಲಿಸುವ ಮೂಲಕ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ.ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬು ರಾಠೋಡ ಮತ್ತು ಸಂತೋಷಕುಮಾರ ಎಂಬ ಕಾರ್ಮಿಕರ ಮೇಲೆ ಯಾದಗಿರಿ ವಿಭಾಗಿಯ ನಿಯಂತ್ರಣಾಧಿಕಾರಿಗಳ ಸಂಬಂಧಿಯಾದ ಗಿರೀಶ ಕುಮಟಳ್ಳಿ ಎಂಬ ಸಂಚಾರಿ ನಿರೀಕ್ಷಕರು ಮುಂಚೆಯಿಂದಲು ವಿನಾಕಾರಣ ಈ ಇಬ್ಬರು ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅಲ್ಲದೆ ಈ ಕಾರ್ಮಿಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ನೀಡಿದ್ದಾರೆ.
ಇದರಿಂದ ನೊಂದ ಕಾರ್ಮಿಕರು ಕೂಡ ಪೊಲೀಸರಿಗೆ ಪ್ರತಿ ದೂರು ನೀಡಿದ್ದು.ಇದನ್ನೆ ಸೇಡಾಗಿಸಿಕೊಂಡ ಸಂಚಾರಿ ನಿರೀಕ್ಷಕ ಗಿರೀಶ ಕುಮಟಳ್ಳಿ ಮತ್ತು ಘಟಕ ವ್ಯವಸ್ಥಾಕರು ಕಾರ್ಮಿಕರಾದ ಬಾಬು ರಾಠೋಡ ಮತ್ತು ಸಂತೋಷಕುಮಾರರನ್ನು ಬಳ್ಳಾರಿ ಹಾಗು ಹೋಸಪೇಟೆ ಡಿಪೋಗಳಿಗೆ ವರ್ಗಾವಣೆ ಮಾಡಿದ್ದಾರೆ.ಡಿ ಗ್ರುಪ್ ನೌಕರರಾದ ಇವರಿಗೆ ದೂರದ ಬಳ್ಳಾರಿಗೆ ಹೋಗಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ.ಆದ್ದರಿಂದ ಯಾದಗಿರಿ ಜಿಲ್ಲೆಯ ಯಾವುದೇ ಡಿಪೋಗೆ ವರ್ಗಾಯಿಸಲು ಅಭ್ಯಾಂತರವಿಲ್ಲ.ಆದರೆ ಉದ್ದೇಶಪೂರ್ವಕವಾಗಿ ಇವರನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ,ಇದನ್ನು ಕೂಡಲೆ ರದ್ದುಗೊಳಿಸುವಂತೆ ಆಕ್ರೋಶದಿಂದ ಆಗ್ರಹಿಸಿದರು.ಅಲ್ಲದೆ ಈ ಕಾರ್ಮಿಕರ ವರ್ಗಾವಣೆ ರದ್ದುಗೊಳಿಸದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಧರಣಿ ನಿರತರ ಬಳಿಗೆ ವಿಭಾಗಿಯ ಸಂಚಾರಿ ಅಧಿಕಾರಿ ಬೈಲಪ್ಪ ಬಿರಾದಾರ ಆಗಮಿಸಿ ಧರಣಿ ನಿರತರ ಬೇಡಿಕೆಗಳನ್ನು ಆಲಿಸಿ,ನಂತರ ಸುರಪುರ ಠಾಣೆ ಪಿಐ ಆನಂದರಾವ್ ಅವರ ಮದ್ಯಸ್ಥಿಕೆಯಲ್ಲಿ ನಿಮ್ಮ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ವ್ಯವಸ್ಥಾಪಕ ನಿರ್ದೇಶಕರು ಸಾರಿಗೆ ಸದನ ಕಲಬುರ್ಗಿರವರಿಗೆ ಬರೆದ ಮನವಿಯನ್ನು ಸಲ್ಲಿಸಿ ಧರಣಿಯನ್ನು ನಿಲ್ಲಿಸಲಾಯಿತು.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಗಾಗಿ ಡಿಎಸ್‌ಪಿ ಶಿವನಗೌಡ ಪಾಟೀಲರ ನೇತೃತ್ವದಲ್ಲಿ ಆರಕ್ಷಕ ನಿರೀಕ್ಷಕ ಆನಂದರಾವ್ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.ಧರಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ದೇವಿಂದ್ರಪ್ಪ ಪತ್ತಾರ,ಚಂದ್ರಶೇಖರ ಹಸನಾಪುರ,ನಿಂಗಣ್ಣ ಗೋನಾಲ,ರಾಹುಲ ಹುಲಿಮನಿ,ಭೀಮಾಶಂಕರ ಬಿಲ್ಲವ್,ಭೀಮರಾಯ ಸಿಂಧಗೇರಿ,ಉಸ್ತಾದ ವಜಾಹತ್ ಹುಸೇನ,ಸೋಮಶೇಖರ ಸಜ್ಜನ್,ಶೇಖರ ನಾಯ್ಕ,ವೆಂಕೋಬ ದೊರೆ,ತಾಯಪ್ಪ ಕನ್ನೆಳ್ಳಿ,ಮಾನಪ್ಪ ಝಂಡದಕೇರಾ,ವಿಜಯಕುಮಾರ ಕರಡಕಲ್,ನಾಗು ಗೋಗಿಕೇರಾ,ಶಿವಣ್ಣ ನಾಗರಾಳ,ರಮೇಶ ನಂಬಾ,ಹಣಮಂತ ಕಟ್ಟಿಮನಿ,ಪರಮಣ್ಣ ಹಂಧ್ರಾಳ ಸೇರಿದಂತೆ ಅನೇಕರಿದ್ದರು.