ಕಲಬುರಗಿ: ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕಾಯಂಗೊಳಿಸಿ ಜ್ಯೂನಿಯರ್ ಮೀಟರ್ ಹುದ್ದೆಯಾಗಿ ಮಾರ್ಪಡಿಸುವಂತೆ ಹೈಕೋರ್ಟ್ ಆದೇಶ ಜಾರಿಗೊಳಿಸಲು ಸೆಪ್ಟೆಂಬರ್ ೬ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಭೆಯನ್ನು ಆಗಸ್ಟ್ ೨೧ರಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆ.೨೧ರಂದು ಕಲಬುರಗಿಯಲ್ಲಿ ಜೆಸ್ಕಾಂ ವಿಭಾಗದ ಸಭೆ, ಆ.೨೩ರಂದು ಹುಬ್ಬಳ್ಳಿಯಲ್ಲಿ ಹೆಸ್ಕಾಂ ವಿಭಾಗದ ಸಭೆ, ಆ.೨೪ರಂದು ಚೆಸ್ಕಾಂ (ಚಾಮುಂಡೇಶ್ವರಿ) ವ್ಯಾಪ್ತಿ ಹಾಗೂ ಆ.೨೫ರಂದು ತುಮಕೂರಿನಲ್ಲಿ ಬೆಸ್ಕಾಂ ವ್ಯಾಪ್ತಿಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘಟನಾ ಸಭೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯ ಉಚ್ಛ ನ್ಯಾಯಾಲಯವು ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಕಾಯಂಗೊಳಿಸುವಂತೆ ಆದೇಶ ನೀಡಿದೆ. ಮತ್ತೊಂದೆಡೆ, ಈ ಪ್ರತಿನಿಧಿಗಳನ್ನು ಕಾಯಂಗೊಳಿಸುವುದಾಗಿ ಇಂಧನ ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದರೂ, ಮತ್ತೊಂದೆಡೆ, ಪ್ರತಿನಿಧಿಗಳನ್ನು ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಸರಕಾರವೇ ಹೈಕೋರ್ಟ್ ವಿಭಾಗೀಯ ಪೀಠದ ಎದುರು ಮೇಲ್ಮನವಿ ಸಲ್ಲಿಸಿದೆ. ಸರಕಾರದ ಈ ದ್ವಂದ್ವ ನಿಲುವು ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ಕಾಂತರಾಜು, ಜೆಸ್ಕಾಂ ಸಂಘದ ಅಧ್ಯಕ್ಷ ರಾಜಶೇಖರ ಹಿರೇಮಠ, ಹೆಸ್ಕಾಂ ಸಂಘದ ಅಧ್ಯಕ್ಷ ಶಿವಶಂಕರ ಘೂಳಿ ಮತ್ತು ಶ್ರಮಜೀವಿಗಳ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗರಾಜ ಹರಸೂರ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.