ಯಾವುದೇ ವಿವಾದಗಳಿಗೆ ಎಡೆ ಮಾಡಿಕೊಡದೆ ಮಠ-ಮಾನ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ದುಸ್ತರವಾಗಿರುವ ಈಗಿನ ಕಾಲದಲ್ಲಿ ಪೂಜ್ಯರ ದೂರದೃಷ್ಟಿ ಹಾಗೂ ಕತೃತ್ವ ಶಕ್ತಿ ಮಾದರಿಯಾಗಿದೆ. ಸರ್ಕಾರದ ಅನೇಕ ಯೋಜನೆಗಳಿಗೆ ಪ್ರೇರಣೆಯಾಗಿರುವ ಅವರ ಕಾರ್ಯಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. -ವೈಜನಾಥ ಕೋಳಾರ, ನಿವೃತ್ತ ಪ್ರಾಚಾರ್ಯ, ಕಲಬುರಗಿ.
ಕಲಬುರಗಿ: ಸುತ್ತೂರು ಮಠದ ೨೩ನೇ ಪೀಠಾಧಿಪತಿಗಳಾಗಿದ್ದ ಲಿಂ. ಡಾ. ರಾಜೇಂದ್ರ ಮಹಾಸ್ವಾಮಿಗಳು ಮುನುಷ್ಯನಿಗೆ ಅನ್ನ, ಅರಿವು, ಆರೋಗ್ಯ ಅಗತ್ಯ ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ನಿವೃತ್ತ ಪ್ರಾಚಾರ್ಯ ವೈಜನಾಥ ಕೋಳೂರು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ನಗರದ ವೀರೇಂದ್ರ ಪಾಟೀಲ ಬಡಾವಣೆಯ “ವಚನಾಮೃತ” ಸಭಾಂಗಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರ ದಿನಾಚರಣೆ ಹಾಗೂ ಜಗದ್ಗುರು ಲಿಂ. ಡಾ. ರಾಜೇಂದ್ರ ಮಹಾಸ್ವಾಮಿಗಳ ೧೦೯ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಬಡ, ದೀನ-ದಲಿತ ವಿದ್ಯಾರ್ಥಿಗಳಿಗಾಗಿ ೧೯೯೩೬ರಲ್ಲಿ ವಸತಿ ನಿಲಯ ಆರಂಭಿಸಿದ್ದರು. ೧೯೫೪ರಲ್ಲಿ ಜೆ.ಎಸ್.ಎಸ್. ವಿದ್ಯಾಪೀಠ ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು ಎಂದು ತಿಳಿಸಿದರು.
ಡಾ. ರಾಜೇಂದ್ರ ಮಹಾಸ್ವಾಮಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕ ಬಸವರಾಜ ಜನಕಟ್ಟಿ, ಶಿಕ್ಷಣ ಹಾಗೂ ಅನ್ನ ದಾಸೋಹ ಪರಂಪರೆಯನ್ನು ಮುಂದುವರಿಸಿದ ಪೂಜ್ಯರು, ಅಕ್ಷರದ ಹಣತೆ ಹಚ್ಚಿದರು. ವ್ಯಕ್ತಿ ಪೂಜೆ ಮಾಡಿದೆ ತತ್ವ ಪೂಜಕರಾಗಬೇಕು ಎಂಬುದರ ಅರಿವು ನೀಡಿದರು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಶಿಕಾಂತ ಆರ್. ಮೀಸೆ ಮಾತನಾಡಿ, ಬಸವಾದಿ ಶರಣರ ಕಾಯಕ, ದಾಸೋಹ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕು ಬಂಗಾರ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಉಪಾಧ್ಯಕ್ಷ ಡಾ. ವಿಜಯಕುಮಾರ ಪರೂತೆ, ಕೋಶಾಧ್ಯಕ್ಷ ವಿಶ್ವನಾಥ ಮಂಗಲಗಿ ವೇದಿಕೆಯಲ್ಲಿದ್ದರು. ಸಂತೋಷ ಹೂಗಾರ ನಿರೂಪಿಸಿದರು. ಡಾ. ಶರಣಬಸವ ವಡ್ಡನಕೇರಿ ಸ್ವಾಗತಿಸಿದರು. ಡಾ. ಶಿವರಂಜನ ಸತ್ಯಂಪೇಟೆ ಶರಣು ಸಮರ್ಪಿಸಿದರು.
ಕಲ್ಯಾಣಪ್ಪ ಬಿರಾದಾರ. ಹಣಮಂತರಾಯ ತೋಟ್ನಳ್ಳಿ, ವಿ.ಎಸ್.ರಟಕಲ್, ಬಸವರಾಜ ಧೂಳಾಗುಂಡಿ, ಸಿದ್ರಾಮಪ್ಪ ಹಾಗರಗಿ, ಶಿವಶರಣಪ್ಪ ಕಲಶೆಟ್ಟಿ, ಬಾಬುರಾವ ಜನಕಟ್ಟಿ, ಸಿದ್ದಮ್ಮ ಜನ್ನಾ, ಮಹಾದೇವಿ ಜನಕಟ್ಟಿ, ಕಮಲಾಬಾಯಿ, ಪರ್ವತಯ್ಯ ಮಠ, ಚಿದಂಬರ ಪಾಟೀಲ ರಾಜನಾಳ, ನಿಜಗುಣಿ ದೇವಣಗಾಂವ, ಬಸಯ್ಯಸ್ವಾಮಿ ಹುಬ್ಬಳ್ಳಿಮಠ, ಸುನಿಲ್, ಹರ್ಷಿತ ವಡ್ಡನಕೇರಿ ಸೇರಿದಂತೆ ಅನೇಕರಿದ್ದರು.