ಸುರಪುರ: ನಗರದ ವಣಕಿಹಾಳದಲ್ಲಿ ಕೊಳಗೇರಿ ಅಭಿವೃಧ್ಧಿ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳ ನಿರ್ಮಾಣ ತಡೆ ಹಿಡಿಯುವಂತೆ ಆಗ್ರಹಿಸಿ ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯರು ಮನವಿ ಸಲ್ಲಿಸಿದರು.
ಶುಕ್ರವಾರ ನಗರದ ನಗರಸಭೆ ಕಾರ್ಯಾಲಯದ ಮುಂದೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ) ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಸದಸ್ಯರು ಮಾತನಾಡಿ,ಈಗ ವಣಕಿಹಾಳದ ಸರ್ವೇ ನಂಬರ್ ೧೮೬ ರಲ್ಲಿ ೧೯೨ ನಿವೇಶನಗಳನ್ನು ಈ ಹಿಂದೆ ೧೯೯೫-೯೬ರಲ್ಲಿಯೇ ನಿವೇಶನ ವಿತರಿಸಿ ಹಕ್ಕುಪತ್ರ ನೀಡಲಾಗಿದೆ.
ಈಗ ಅದೇ ಸ್ಥಳದಲ್ಲಿ ಕೊಳಗೇರಿ ಅಭಿವೃಧ್ಧಿ ಮಂಡಳಿಯಿಂದ ಮನೆಗಳನ್ನು ನಿರ್ಮಿಸಲು ಮುಂದಾಗುವ ಮೂಲಕ ಈ ಹಿಂದೆ ಹಕ್ಕು ಪತ್ರ ಪಡೆದ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ.ಆದ್ದರಿಂದ ಕೂಡಲೇ ಹಿಂದೆ ಹಕ್ಕು ಪತ್ರ ಪಡೆದ ಫಲಾನುಭವಿಗಳಿಗೆ ನೀಡಲು ಕ್ರಮ ಕೈಗೊಳ್ಳಬೇಕು,ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆ ಮುಂದೆ ಎಲ್ಲಾ ೧೯೨ ಫಲಾನುಭವಿಗಳೊಂದಿಗೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ನಂತರ ನಗರಸಭೆ ಪೌರಾಯುಕ್ತರಿಗೆ ಬರೆದ ಮನವಿಯನ್ನು ನಗರಸಭೆ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸೋಮನಾಥ ನಾಯಕ ಡೊಣ್ಣಿಗೇರಾ,ನಾಸೀರ ಹುಸೇನ ಕುಂಡಾಲೆ,ಮೆಹಬೂಬ,ಜುಮ್ಮಣ್ಣ ಕೆಂಗೂರಿ,ಖಮುರುದ್ದೀನ್,ಅಹ್ಮದ ಶರೀಫ್,ಸುವರ್ಣ ಸಿದ್ದರಾಮ ಎಲಿಗಾರ,ಹೀನಾ ಕೌಸರ್ ಶಕೀಲ ಅಹ್ಮದ್,ಚನ್ನಮ್ಮ ಮಡಿವಾಳ,ಸಿರಿಯಾರ ಬಾನು ಮಹ್ಮದ್ ಹಬೀಬ,ನೂರಜಹಾನ ಬೇಗಂ ನೂರಲ್ ಹಸನ್,ಲಕ್ಷ್ಮೀ ಎಮ್.ಬಿಲ್ಲವ್,ಪಾರ್ವತಿ ಗಾಳೆಪ್ಪ,ಸಿದ್ದಲಿಂಗಮ್ಮ ಮಲ್ಕಪ್ಪಗೌಡ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.