ಶಹಾಬಾದ:ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವು ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿದೆ.ಉತ್ತಮವಾದ ಆರೋಗ್ಯವನ್ನು ಪಡೆಯಬೇಕಾದರೆ ಪೌಷ್ಠಿಕ ಅಂಶವನ್ನು ಹೊಂದಿರುವ ಆಹಾರವನ್ನು ಬಾಣಂತಿಯರು ಮತ್ತು ಗರ್ಭೀಣಿಯರು ಸೇವಿಸಬೇಕೆಂದು ನಗರದ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.
ಅವರು ನಗರದ ಬಸವೇಶ್ವರ ನಗರದ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯಾವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಆಯೋಜಿಸಲಾದ ವಿಶ್ವ ಪೌಷ್ಠಿಕ ಮಾಸಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹುಟ್ಟುವಂತ ಮಕ್ಕಳು ಆರೋಗ್ಯವಂತರಾಗಿರಲು ಕಾಲ ಕಾಲಕ್ಕೆ ಸಿಗುವ ಹಣ್ಣು ಹಂಪಲುಗಳನ್ನು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಯೋಜನೆಗಳಿದ್ದು ಅವುಗಳನ್ನು ಸದುಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಹುಟ್ಟುವ ಮಗುವು ಅಪೌಷ್ಠಿಕತೆಯಿಂದ ಬಳಲದಿರಲಿ ಎನ್ನುವ ದೃಷ್ಠಿಯಿಂದ ಸರ್ಕಾರವು ಅನೇಕ ಯೋಜನೆ ಜಾರಿಗೊಳಿಸಿದ್ದು, ಗರ್ಭೀಣಿಯರು ಅಂಗನವಾಡಿ ಕೇಂದ್ರಗಳ ಮುಖಾಂತರ ಇದರ ಸದುಪಯೋಗಪಡಿಸಿಕೊಳ್ಳಿ ಮತ್ತು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದ್ದು, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ನ್ಯಾಯಾವಾದಿಗ ಅತುಲ್ ಯಲಶೆಟ್ಟಿ ಮಾತನಾಡಿ, ಗರ್ಭೀಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪೌಷ್ಟಿಕ ಆಹಾರವನ್ನು ನೀಡುವುದರ ಮೂಲಕ ರಕ್ತ ಹೀನತೆಯನ್ನು ತಡೆಗಟ್ಟುವುದೇ ಸರಕಾರದ ಮೂಲ ಉದ್ದೇಶವಾಗಿದೆ ಎಂದರು.
ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ ಮಾತನಾಡಿ,ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುತ್ತಿದೆ.ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಶಾರೀರರಿಕ,ಮಾನಸಿಕ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಆದ್ದರಿಂದ ಈ ತೊಂದರೆಯನ್ನು ಹೋಗಲಾಡಿಸಲು ಈ ಯೋಜನೆ ತಂದಿದೆ.ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರಾದ ಮೀನಾಕ್ಷಿ ಗುಂಡಗುರ್ತಿ, ನೇತ್ರಾವತಿ, ನ್ಯಾಯಾವಾದಿಗಳ ಸಂಘದ ಕಾರ್ಯದರ್ಶಿ ಡಿ.ಸಿ.ಕುಲಕುಂದಿಕರ್, ಉಮಾ ಮಲಕೂಡ ಸೇರಿದಂತೆ ಇತರರು ಹಾಜರಿದ್ದರು.