ಕೊಪ್ಪಳ (ಕುಕನೂರ) : ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ‘ಕಿತ್ತೂರು ರಾಣಿ ಚೆನ್ನಮ್ಮ ಳ 244ನೇ ಜಯಂತಿಯನ್ನು ಆಚರಿಸಲಾಯಿತು.
ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಲೆಯ ಉಪಪ್ರಾಂಶುಪಾಲ ಸೋಮಶೇಖರ್ ಎಲ್. ಲಮಾಣಿ ‘ ಅವರು ಮಾತನಾಡಿ ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾದದ್ದು. ಅವರು ರಾಜ ಮನೆತನದವರಾಗಿದ್ದರಿಂದ ಬಾಲ್ಯದಿಂದಲೇ ಕುದುರೆ ಸವಾರಿ, ಕತ್ತಿ ಬಳಸುವ ಪರಿಗಳ ಬಗ್ಗೆ ತರಬೇತಿ ಪಡೆದಿದ್ದರು. ಚನ್ನಮ್ಮ ಅವರು ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ. ಹಾಗಾಗಿ ಅವರ ಜನ್ಮ ದಿನವನ್ನು ಕಿತ್ತೂರಿನ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ’ ಎಂದರು.
‘ಚನ್ನಮ್ಮ ಅವರ ಜೀವನ ಮತ್ತು ಹೋರಾಟ ನಾಡಿನ ಪ್ರತಿಯೊಬ್ಬ ಮಹಿಳೆಗೂ ಸ್ಫೂರ್ತಿದಾಯಕವಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಜೊತೆಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಂತಹ ಧೀರ ಮಹಿಳೆಯ ಜೀವನ ಮತ್ತು ಹೋರಾಟ ಆದರ್ಶವಾಗಬೇಕು ಎಂದರು.
ಈ ಸಂದರ್ಭದಲ್ಲಿ ರಾಜು ಪೂಜಾರ, ಶ್ರೀಲತಾ ಕೆ. ವಿದ್ಯಾಪತಿ, ಗೀತಾ ಪದಕಿ, ಅರುಂದತಿ ಬಟನೂರ, ಗಿರೀಶ ನಿಲೋಗಲ್, ಆರ್. ಎಂ. ದೇವರೆಡ್ಡಿ, ಉದಯ ನಿಂಗಾಪುರ ಹಲವರು ಇದ್ದರು.