ಸೊನ್ನ ಬ್ಯಾರೇಜ್ ಗೆ ಜಿಲ್ಲಾಧಿಕಾರಿ ಭೇಟಿ: ನೀರು ಒಳಹರಿವಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿ

0
220

ಕಲಬುರಗಿ: ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ಸೋಮವಾರ ಸಾಯಂಕಾಲ ಅಫಜಲಪೂರ ತಾಲೂಕಿನ ಸೊನ್ನ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಭೇಟಿ ನೀಡಿ ಭೀಮಾ ನದಿಗೆ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಹಾರಾಷ್ಟ್ರದ ಉಜನಿ ಮತ್ತು ವೀರಾ ಡ್ಯಾಮಿನಿಂದ ಸುಮಾರು 1.34 ಲಕ್ಷ ಕ್ಯೂಸೆಕ್ಸ್ ನೀರು ಈಗಾಗಲೇ ಭೀಮಾನದಿಗೆ ಬಿಟ್ಟಿರುವುದರಿಂದ ಮಂಗಳವಾರ ಸೊನ್ನ ಬ್ಯಾರೇಜ್ ಗೆ ನೀರು ತಲುಪುವ ಸಂಭವ ಇದೆ. 2017ರಲ್ಲಿ ಇಷ್ಟೇ ಪ್ರಮಾಣದ ನೀರು ಬಿಟ್ಟಾಗ ಭೀಮಾ ತೀರದ ಹಲವು ಪ್ರದೇಶಗಳು ತೊಂದರೆಗೀಡಾಗಿದ್ದು, ಇದು ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ನದಿ ತೀರದ ಬಾಧಿತ ಸ್ಥಳೀಯ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಕ್ತ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಫಜಲಪೂರ ತಹಶೀಲ್ದಾರ‌ ಮಧುರಾಜ ಕೂಡಲಗಿ ಅವರಿಗೆ ಡಿ.ಸಿ. ನಿರ್ದೇಶನ ನೀಡಿದರು. ನದಿಗೆ ನೀರು ಹರಿಸುವ ಮುನ್ನ ಸಾರ್ವಜನಿಕರಿಗೆ ಗ್ರಾಮ ಮಟ್ಟದಲ್ಲಿ ಅಗತ್ಯ ಮಾಹಿತಿ ನೀಡಬೇಕು, ಸ್ಥಳೀಯ ಗ್ರಾಮ ಲೆಕ್ಕಿಗರು, ಪಿ.ಡಿ.ಓ ಕೇಂದ್ರಸ್ಥಾನದಲ್ಲಿಯೆ ಇದ್ದು ನಿಗಾ ವಹಿಸಬೇಕು ಎಂದರು.

Contact Your\'s Advertisement; 9902492681

ಸೊನ್ನ‌ ಬ್ಯಾರೇಜ್ ತುಂಬಿದ ನಂತರ ನೀರು ಬಿಡುವ ಮುನ್ನ ನೀರಾವರಿ ಇಲಾಖೆಯ ಅಧಿಕಾರಿಗಳು ಮುಂದಿನ ಬ್ಯಾರೇಜ್ ಅಧಿಕಾರಿಗಳಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದರು.

ಭೀಮಾ ಏತ ನೀರಾವರಿ ಯೋಜನೆಯ ಎಇಇ ಲಕ್ಷ್ಮಿಕಾಂತ್ ಬಿರಾದಾರ ಮಾತನಾಡಿ ಕಳೆದ ಮೂರು ದಿನಗಳ ಹಿಂದೆ ವೀರಾ ಡ್ಯಾಮಿನಿಂದ 70000 ಸಾವಿರ ಕ್ಯೂಸೆಕ್ಸ್ ನೀರು, ಉಜ್ಜಯಿನಿ ಡ್ಯಾಮ್ ನಿಂದ ಸೋಮವಾರ ಮಧ್ಯಾಹ್ನ 64000 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿ ಬಿಡಲಾಗಿದ್ದು, ಈ ನೀರು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸೊನ್ನ ಬ್ಯಾರೇಜ್ ತಲುಪಲಿವೆ. ಸೊನ್ನ ಬ್ಯಾರೇಜ್ ನಲ್ಲಿ 3.1 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ಪ್ರಸ್ತುತ 2 ಟಿಎಂಸಿ ನೀರು ಸಂಗ್ರಹವಾಗಿದೆ. 3 ಟಿ.ಎಂ‌.ಸಿ. ವರೆಗೆ ನೀರು ಸಂಗ್ರಹಣೆ ಮಾಡಿಕೊಂಡು ತದನಂತರ ಬರುವ ಒಳಹರಿವಿನ ಪ್ರಮಾಣದಷ್ಟೇ ನೀರನ್ನು 29 ಗೇಟ್ ಮೂಲಕ ಹೊರಬಿಡಲಾಗುವುದು ಎಂದು ಡಿ.ಸಿ. ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ, ಭೀಮಾ ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತ ಮಲ್ಲಿಕಾರ್ಜುನ ಜಾಕಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ಇದಕ್ಕು ಮುನ್ನ‌ ಜಿಲ್ಲಾಧಿಕಾರಿಗಳು ಅಳ್ಳಗಿ(ಬಿ) ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸೊನ್ನ ಬ್ಯಾರೇಜಿನ ಹಿನ್ನೀರಿನ ಸಂಗ್ರಹವನ್ನು ಸಹ ವೀಕ್ಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here