ಕಲಬುರಗಿ: ತಾಯಿಋಣ, ಮಣ್ಣಿನ ಋಣ ತೀರಿಸಿದ ಮಹನೀಯರ ಸ್ಮರಣೆ, ಬಸವಾದಿ ಶರಣರ ಬದುಕಿನ ಪರಿ ನಮ್ಮದಾಗಬೇಕು ಎಂದು ಬೆಳಗಾವಿ ಸಿಐಡಿ ವಿಭಾಗದ ಸಿಪಿಐ ಜ್ಯೋತಿರ್ಲಿಂಗ ಸಿ. ಹೊನಗಟ್ಟಿ ಅಭಿಪ್ರಾಯಪಟ್ಟರು.
ನಗರದ ಎಸ್.ಎಸ್. ತೆಗನೂರ ಪಿಯು ಡಿಗ್ರಿ ಕಾಲೇಜಿನಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಇಂದು ಹಮ್ಮಿಕೊಂಡ ಶರಣರಾದ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪಗೋಳ್ ಸ್ಮರಣಾರ್ಥ ಆಯೋಜಿಸಿದ ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ.. ಮನ ಬೆಸೆದು ಮಾಡೋದಿದೆ ಮಾನವೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಎಲ್ಲ ಕಲಂಗಳು ಬಸವಣ್ಣನವರ ಕಳಬೇಡ, ಕೊಲಬೇಡ ವಚನದಲ್ಲಿ ಇದೆ. ಇದು ವಚನ ಸಾಹಿತ್ಯದ ಶ್ರೇಷ್ಠತೆಯನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.
ಜನಪದ ಸಾಹಿತ್ಯ ಬೇರು, ವಚನ ಸಾಹಿತ್ಯ ಹೂ ಎನ್ನುವ ಮಾತಿನಂತೆ ಬದುಕಿನ ನೀತಿ ಬೋಧನೆಗಳಿರುವ ಇಂತಹ ಬದುಕಿನ ಸಾಹಿತ್ಯದ ಅಧ್ಯಯನ ಮತ್ತು ಅರಿತು ನಡೆಯುವುದು ಅಗತ್ಯ ಎಂದು ತಿಳಿಸಿದರು. ನಮ್ಮನ್ನು ನಾವೆ ಅರಿತುಕೊಳ್ಳುವ ವಚನಗಳ ಪಚನ ಮಾಡಿಕೊಂಡಾಗ ಮಾತ್ರ ಬದುಕಿನ ಹಂದರ ಸುಂದರಗೊಳ್ಳಲಿದೆ ಎಂದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ತಲ್ಲಣಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಇಂಧುಮತಿ ಪಾಟೀಲ ಮಾತನಾಡಿ, ಬದುಕಿನ ಬಹುತೇಕ ತಲ್ಲಣಗಳಿಗೆ ಉತ್ತರ ನೀಡುವಂತಿರುವ ವಚನ ಸಾಹಿತ್ಯದಲ್ಲಿ ಮಹಿಳಾ ತಲ್ಲಣಗಳಿಗೂ ಸಮರ್ಪಕ ಉತ್ತರ ವಿದೆ ಎಂದರು.
ಕಲುಷಿತಗೊಂಡ ಇಂದಿನ ದಿನಮಾನಗಳಲ್ಲಿ ಹಾಲಿನಂಥ ಶುಭ್ರ, ಶುಚಿ, ರುಚಿಯನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಸದ್ಗುಣಗಳು ನೆಲೆಗೊಳ್ಳಲು ಸಾಧ್ಯ ಎಂದರು.
ಬಸವಪೂರ್ವದಲ್ಲಿ ಹೆಣ್ಣು ರಕ್ಕಸಿ, ಹೆಣ್ಣು ಹೆರುವ ಯಂತ್ರ, ಹೆಣ್ಣು ಮಾಯೆ ಎಂದು ಕರೆಯಲಾಗುತ್ತಿತ್ತು. ಆದರೆ ಶರಣರು ಹೆಣ್ಣನ್ನು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಕರೆದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತೆಗನೂರ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜ್ಯೋತಿ ತೆಗನೂರ ಮಾತನಾಡಿ, ಜನಪದ ಸಂಸ್ಕೃತಿ ಮತ್ತು ವಚನ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಮ್ಮ ಸಿದ್ರಾಮಪ್ಪ ಬಾಲಪಗೋಳ್, ಯುವ ಮುಖಂಡ ಶರಣಗೌಡ ಪಾಟೀಲ ಪಾಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿ, ಸಮಾಜಕ್ಕಾಗಿ ದುಡಿದ ವ್ಯಕ್ತಿಗಳನ್ನು ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.
ರಮೇಶ ಬಡಿಗೇರ ನಿರೂಪಿಸಿದರು. ಅಮೃತಪ್ಪ ಅಣೂರ ಪ್ರಾರ್ಥಿಸಿದರು. ಪರಮೇಶ್ವರ ಶೆಟಕಾರ ಸ್ವಾಗತಿಸಿದರು. ರವೀಂದ್ರಕುಮಾರ ಭಂಟನಳ್ಳಿ ಶರಣು ಸಮರ್ಪಿಸಿದರು. ಎಸ್.ಎಸ್. ಪಟ್ಟಣಕರ್, ಪ್ರಸನ್ನ ವಾಂಜರಖೇಡ, ಶಿವರಾಜ ಅಂಡಗಿ ಇತರರಿದ್ದರು.