ಶಹಾಬಾದ: ಮಕ್ಕಳ ಚಾಚಾ ಆಗಿದ್ದ ನೆಹರೂ ಅವರು ಈ ದೇಶ ಕಂಡ ಮಹಾನ್ ಚೇತನವಾಗಿದ್ದರು ಎಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಪೀರಪಾಶಾ ಹೇಳಿದರು.
ಅವರು ಸೋಮವಾರ ನಗರದ ನಹರು ವೃತ್ತದಲ್ಲಿ ಚಾಚಾ ನೆಹರು ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಶಿಕ್ಷೆ ಅನುಭವಿಸಿ ದೇಶದ ಪ್ರಥಮ ಪ್ರಧಾನಿಯಾಗಿ ಪಂಡಿತ ಜವಾಹರಲಾಲ್ ನೆಹರು ಭಾರತವನ್ನು ಪ್ರಗತಿ ಪಥದಲ್ಲಿ ಸಾಗಿಸಲು ಕಾರಣರಾದರು. ನೆಹರೂ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಲು ಹಿಂಜರಿಯಲಿಲ್ಲ. ಜೀವನವಿಡೀ ದೇಶಕ್ಕಾಗಿ ದುಡಿದ ಅಪ್ರತಿಮ ದೇಶಪ್ರೇಮ ನಮಗೆಲ್ಲಾ ಮಾದರಿ’ ಎಂದು ಸ್ಮರಿಸಿದರು.
ಎಲ್ಲರೂ ಅವರ ಆದರ್ಶ ಪಾಲಿಸೋಣ ಎಂದರು.
ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ ಮಾತನಾಡಿ, ನೆಹರು ಅವರು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು, ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಭಾರತ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ನೀತಿಗಳನ್ನು ರಚಿಸಿ ಆಧುನಿಕ ಭಾರತದ ನಿರ್ಮಾತೃರಾಗಿದ್ದಾರೆ. ಮಕ್ಕಳ ಮೇಲಿರುವ ಅಪಾರವಾದ ಪ್ರೀತಿಯಿಂದ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ, ರೇವಣಸಿದ್ದ ಧನಶೆಟ್ಟಿ, ಶೇಖ ಚಾಂದ್ ವಾಹೀದಿ,ಶೇರ ಅಲಿ, ಹಣಮಂತ ತರನಳ್ಳಿ ಸೇರಿದಂತೆ ಅನೇಕರು ಇದ್ದರು.