ಸುರಪುರ : ಬೆಳೆ ಹಾನಿ ಸಮೀಕ್ಷೆ ಮತ್ತು ಪರಿಹಾರದ ಕುರಿತು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ನರಸಿಂಹ ನಾಯಕ ರಾಜುಗೌಡ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಅವರು ಕಂದಾಯ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಮಾತನಾಡಿ,ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿ ಕುರಿತು ಸರಿಯಾದ ಸಮೀಕ್ಷೆ ಕೈಗೊಂಡು ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಕರ್ತವ್ಯ ನಿರ್ವಹಿಸಬೇಕು ಕೆಲಸದಲ್ಲಿ ನಿರ್ಲಕ್ಷ್ಯತನ ಬೇಡ, ಸರಿಯಾದ ಸಮೀಕ್ಷೆ ಕೈಗೊಂಡು ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕುವಂತೆ ಮಾಡಿ ಎಂದರು.
ಹಾನಿಯ ಸಮೀಕ್ಷೆಯನ್ನು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರೊಬ್ಬರು ಸರಿಯಾಗಿ ಕೈಗೊಳ್ಳದೇ ಇರುವದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಮೀಕ್ಷೆಯಲ್ಲಿ ಯಾವುದೇ ರಾಜಕೀಯ ಬೇಡ ಯಾರ ಮಾತನ್ನೂ ಕೇಳಬೇಡಿ ಯಾರ ಮುಲಾಜಿಗೆ ಒಳಗಾಗದೇ ಸರಿಯಾದ ಸಮೀಕ್ಷೆ ಕೈಗೊಳ್ಳಿ ನಿಜವಾಗಿ ಹಾನಿಗೊಳಗಾದವರನ್ನು ಕೈಬಿಡದ ಹಾಗೆ ನೋಡಿಕೊಳ್ಳಿ ಮತ್ತು ನಕಲಿ ಹೆಸರುಗಳನ್ನು ಲಿಸ್ಟ್‍ನಲ್ಲಿ ಇರಬಾರದು ಒಂದು ವೇಳೆ ಕಂಡು ಬಂದಲ್ಲಿ ಅಂತಹ ಹೆಸರುಗಳನ್ನು ರದ್ದುಪಡಿಸಿ ಎಂದು ಸೂಚನೆ ನೀಡಿದ ಅವರು, ಮಾಡಿರುವ ತಪ್ಪನ್ನು ತಿದ್ದಿಕೊಳ್ಳಿ ಅನಧಿಕೃತವಾಗಿ ಯಾವುದೇ ಫಲಾನುಭವಿಗಳನ್ನು ಲಿಸ್ಟ್‍ನಲ್ಲಿ ಸೇರಿಸಬೇಡಿ ಸರಿಯಾಗಿ ಸಮೀಕ್ಷೆ ಕೈಗೊಳ್ಳುವ ಮೂಲಕ ಬೆಳೆ ಹಾನಿಗೊಂಡು ನಿಜವಾಗಿ ತೊಂದರೆಗೊಳಗಾದ ರೈತರಿಗೆ ಹಾಗೂ ಮನೆಗಳು ಬಿದ್ದ ಜನರಿಗೆ ಪರಿಹಾರ ಸಿಗುವಂತಾಗಬೇಕು ಸಮೀಕ್ಷೆ ಕೈಗೊಂಡ ನಂತರ ಹಾನಿಗೊಳಗಾಗಿ ಪರಿಹಾರಕ್ಕೆ ಅರ್ಹರಾದವರ ಹೆಸರುಗಳ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯತಿಗಳ ಮೂಲಕ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸ್ನೇಹಲ್.ಆರ್. ಮಾತನಾಡಿ ಮಳೆಯಿಂದಾದ ಹಾನಿ ಕುರಿತು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಮೂರು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾದ ಸಮೀಕ್ಷೆ ಕೈಗೊಳ್ಳಬೇಕು ಈ ಕುರಿತು ವರದಿ ನೀಡಿದ ನಂತರ ತಹಶೀಲ್ದಾರರು ಇದನ್ನು ಸರಿಯಾಗಿ ಪರಿಶೀಲಿಸಬೇಕು ಲಿಸ್ಟನ್ನು ಗ್ರಾಮ ಪಂಚಾಯತಿಗಳಲ್ಲಿ ಹಚ್ಚುವಂತೆ ಅವರು ಸೂಚನೆ ನೀಡಿದರು.
ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶೀಲ್ದಾರ ಜಗದೀಶ ಚೌರ್, ತಾಪಂ ಇ.ಓ ಚಂದ್ರಶೇಖರ ಪವಾರ್ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಸಭೆಯಲ್ಲಿ ಉಪಸ್ಥಿತರಿದ್ದರು.
9ಸಾವಿರ ಹೆಕ್ಟರ್ ಬೆಳೆ ನಾಶ: ಇತ್ತೀಚೆಗ ಕ್ಷೇತ್ರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸುರಪುರ ತಾಲೂಕಿನ 4557ಹೆಕ್ಟರ್ ಮತ್ತು ಹುಣಸಗಿ ತಾಲೂಕಿನ 4447ಹೆಕ್ಟರ್ ಸೇರಿದಂತೆ ಒಟ್ಟು 9,004ಹೆಕ್ಟರ್ ಬೆಳೆ ನಾಶಗೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು. ಕಳೆದ ಬಾರಿ ಬಿದ್ದ ಅತಿವೃಷ್ಟಿಯಿಂದಾಗಿ ಸುರಪುರ ತಾಲೂಕಿನಲ್ಲಿ 6886ಹೆಕ್ಟರ್ ಮತ್ತು ಹುಣಸಗಿ ತಾಲೂಕಿನಲ್ಲಿ 12,885ಹೆಕ್ಟರ್ ಬೆಳೆ ನಾಶಗೊಂಡಿದ್ದು ಹಾಗೂ ಸರಕಾರದಿಂದ ಸುರಪುರ ತಾಲೂಕಿಗೆ 12ಕೋಟಿ ರೂ ಮತ್ತು ಹುಣಸಗಿ ತಾಲೂಕಿಗೆ 31ಕೋಟಿ ರೂ ಪರಿಹಾರ ಮಂಜೂರು ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.