ವಾಡಿ: ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆ (ಐಬಿವೈಒ) ವತಿಯಿಂದ ನ.27 ರಿಂದ ಡಿ.7 ವರೆಗೆ ಚಿತ್ತಾಪುರ ತಾಲೂಕಿನ ಸನ್ನತಿ ಬೌದ್ಧ ತಾಣದಲ್ಲಿ ಧಮ್ಮ ಸಂಸ್ಕøತಿ ಬಿಂಬಿಸುವ ಪಬ್ಬಜ್ಜ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ನಿಮಿತ್ತ ಭಂತೇಜಿಗಳಿಂದ ವಿವಿಧ ಗ್ರಾಮಗಳಲ್ಲಿ ಧಮ್ಮ ಚಾರಿಕಾ (ಪಿಂಡಪಾತ) ನಡೆಯಲಿದೆ ಎಂದು ಐಬಿವೈಒ ಅಧ್ಯಕ್ಷ ಸಂದೀಪ ಕಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬೌದ್ಧ ಅನುಯಾಯಿ ಸಂದೀಪ ಕಟ್ಟಿ, ಪಬ್ಬಜ್ಜ ಕಾರ್ಯಕ್ರಮದ ವಿಶೇಷತೆ ವಿವರಿಸಿದ್ದಾರೆ. ಬೌದ್ಧರ ಜೀವನ ಪದ್ದತಿ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಭಂತೇಜಿ ಸಕ್ಕು ಬೋಧಿಧಮ್ಮ ಜಪಾನ್, ಭಂತೆ ಬುದ್ಧರತ್ನ ಮೈಸೂರು ಹಾಗೂ ಭಂತೆ ಬೋಧಿಪಿಯ ಸಾನಿಧ್ಯ ವಹಿಸುವರು. ಮೂತ್ತಕ್ಕೂ ಹೆಚ್ಚು ಬೌದ್ಧ ಸಾಮಣೇರು ಈ ಪಬ್ಬಜ್ಜದಲ್ಲಿ ಪಾಲ್ಗೊಳ್ಳಲಿದ್ದು, ನ.27 ರಂದು ಸಂಜೆ 4:00 ಗಂಟೆಗೆ ಐತಿಹಾಸಿಕ ಸನ್ನತಿಯ ಬೌದ್ಧ ಶಿಲಾಶಾಸನ ಪರಿಸರದಲ್ಲಿ ಪಬ್ಬಜ್ಜ ಕಾರ್ಯಕ್ರಮದ ಉದ್ಘಾಟನೆ ನೆರವೇರುವುದು. ಡಿ.6 ರಂದು ಬೆಳಗ್ಗೆ 9:00 ಗಂಟೆಗೆ ಚಿತ್ತಾಪುರದಲ್ಲಿ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ.
ಈ ಮಧ್ಯೆ ಪ್ರತಿದಿನ ವಿವಿಧ ಗ್ರಾಮಗಳಿಗೆ ತೆರಳಿರುವ ಭಂತೇಜಿಗಳ ತಂಡ ಮನೆ ಮನೆಗೆ ತೆರಳಿ ಚಾರಿಕಾ ನಡೆಸಲಿದೆ. ಬೌದ್ಧರಿಂದ ಮೆರವಣಿಗೆ ನಡೆದು ಅಂಬೇಡ್ಕರರಿಗೆ ದೀಪ ನಮನ, ವಾಡಿಯಲ್ಲಿ ದಲಿತರ ಸ್ಮಶಾನದಿಂದ ಅಂಬೇಡ್ಕರ್ ಪ್ರತಿಮೆ ವರೆಗೆ ಧಮ್ಮ ಜಾಗೃತಿ ಜಾಥಾ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಬಡಾವಣೆಗಳಲ್ಲಿ ಧಮ್ಮ ಜೀವನ ಪದ್ಧತಿ ಪ್ರಚಾರ, ಬುದ್ಧ, ಭೀಮರ ಜೀವನ ಹೋರಾಟದ ಮಹತ್ವ ಸಾರಲಾಗುತ್ತಿದೆ ಎಂದು ಪ್ರತಿಕ್ರೀಯಿಸಿದ್ದಾರೆ.
ಸಮಾಜದಲ್ಲಿ ಶೀಲ ಸಮಾದಿ ಮತ್ತು ಪ್ರಜ್ಞೆ ಮಾರ್ಗವನ್ನು ಸ್ಥಾಪಿಸುವುದರ ಜತೆಗೆ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರುವ ಅಗತ್ಯತೆಯನ್ನು ಪಬ್ಬಜ್ಜ ಕಾರ್ಯಕ್ರಮದ ಮೂಲಕ ಮನವರಿಕೆ ಮಾಡಿಕೊಡಲಾಗುತ್ತಿದೆ. ಶಿಸ್ತುಬದ್ಧ ಜೀವನ ನಡೆಸುವ ಮತ್ತು ತಥಾಗತ ಗೌತಮ ಬುದ್ಧರ ಜೀವನ ಮಾರ್ಗದ ದರ್ಶನ ಮಾಡಿಸಲಾಗುತ್ತಿದೆ. ಬೌದ್ಧ ಶಾಸನಗಳ ಸಂರಕ್ಷಣೆ ಮತ್ತು ಬೌದ್ಧ ತಾಣಗಳ ಜೋಣೋದ್ದಾರ ಕುರಿತು ಗಮನ ಸೆಳೆಯಲಾಗುತ್ತಿದೆ.
ಬೌದ್ಧ ಸಂಸ್ಕøತಿಯ ಈ ಪಬ್ಬಜ್ಜ ಕಾರ್ಯಕ್ರಮ ಶೋಷಿತರ ಬದುಕಿನಲ್ಲಿ ಹೊಸ ಬದಲಾವಣೆ ತರಲಿದೆ. ಬೌದ್ಧ ಸಂಪ್ರದಾಯ ಆಚರಣೆಗೆ ಬಂದರೆ ದೇಶ ಶಾಂತಿ ಸೌಹಾರ್ಧತೆಯ ಕಡೆಗೆ ಸಾಗುತ್ತದೆ. ಈ ಮಹತ್ವದ ಆಶಯದೊಂದಿಗೆ ಸನ್ನತಿಯಲ್ಲಿ ಬೌದ್ಧ ಭಂತೇಜಿಗಳು ಪಬ್ಬಜ್ಜ ಕಾರ್ಯಕ್ರಮ ಆಯೋಜಿಸಿದ್ದಾರೆ. ಜಿಲ್ಲೆಯ ಬೌದ್ಧ ಅನುಯಾಯಿಗಳು ನ.27 ರಂದು ಸನ್ನತಿಯತ್ತ ದಾವಿಸಬೇಕು ಎಂದು ಕಟ್ಟಿ ಮನವಿ ಮಾಡಿದ್ದಾರೆ.
Nice
Super