ಕಲಬುರಗಿ: ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ (ಸಸ್ಯ ಶರೀರ ಕ್ರಿಯಾಶಾಸ್ತ್ರ) ಡಾ. ಆರ್.ಪಿ. ಪಾಟೀಲ ಮತ್ತು ಸಹಾಯಕ ಪ್ರಾಧ್ಯಾಪಕ (ತಳಿ ಅಭಿವೃದ್ಧಿ) ಡಾ. ಸಿದ್ರಾಮಪ್ಪ ಇವರ ನೇತೃತ್ವದ ದ್ವಿಸದಸ್ಯ ತಜ್ಞರ ತಂಡವು ಡಿಸೆಂಬರ್ 7 ರಂದು (ಬುಧವಾರ) ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಕಾರ್ಖಾನೆಗಳಲ್ಲಿನ ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿಯನ್ನು ಪರಿಶೀಲನೆ ನಡೆಸಲಿದೆ.
ರಾಜ್ಯ ಸಕ್ಕರೆ ಕಾರ್ಖಾನೆಗಳಲ್ಲಿನ ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಬೇಕೆಂಬ ನಿರ್ದೇಶನದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು, ಕಾರ್ಖಾನೆ ವ್ಯಾಪ್ತಿಯ ತಹಶೀಲ್ದಾರರು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಸಹ ತಜ್ಞರ ತಂಡದ ಜೊತೆಗಿದ್ದು, ಕಬ್ಬು ಅರೆಯುವ ಅವಧಿಯಲ್ಲಿ ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿಯ ಕುರಿತು ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲಿಸಿ ಕಬ್ಬು ಆಯುಕ್ತರಿಗೆ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಸಮಿತಿಯ ಸದಸ್ಯರಿಗೆ ಆದೇಶಿಸಿದ್ದಾರೆ.
ಈ ತಂಡವು ಬುಧವಾರ ಮೊದಲಿಗೆ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಎನ್.ಎಸ್.ಎಲ್. ಶುಗರ್ ಲಿಮಿಟೆಡ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ನಂತರ ಅಫಜಲಪುರ ತಾಲೂಕಿನ ರೇಣುಕಾ ಶುಗರ್ಸ್ ಲಿಮಿಟೆಡ್ ಮತ್ತು ಕೆ.ಪಿ.ಆರ್. ಶುಗರ್ ಆಂಡ್ ಅಪರೇಲ್ಸ್ ಲಿಮಿಟೆಡ್ ಹಾಗೂ ಜೇವರ್ಗಿ ತಾಲೂಕಿನ ಮಳ್ಳಿಯ ಉಗಾರ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗಳಿಗೆ ಭೇಟಿ ನೀಡಲಿದೆ.