-
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಘೋಷಣೆ
-
ಕಲ್ಯಾಣ ಕರ್ನಾಟಕ ಪ್ರದೇಶದ ನವೋದಯ
ಕಲಬುರಗಿ: ಎಐಸಿಸಿ ಅಧ್ಯಕ್ಷನಾಗಿ ಮೊದಲಬಾರಿಗೆ ನಗರಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷರಾದ ಮಲ್ಲಕಾರ್ಜುನ ಖರ್ಗೆ ಅವರು ಇಂದು ನಗರದ ಎನ್.ವಿ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭ ಮತ್ತು ಕಲ್ಯಾಣ ಕ್ರಾಂತಿ ಸಮಾವೇಶವನ್ನು ಉದ್ದೇಶಿ ಮಾತನಾಡಿ ಪರಿವರ್ತನೆ, ಪ್ರಗತಿ ಹಾಗೂ ಅಭಿವೃದ್ಧಿಗಾಗಿ 10 ಅಂಶಗಳ ಕಾಂಗ್ರೆಸ್ ಸಂಕಲ್ಪ ಮಾಡಿಕೊಂಡಿದೆ.
1. ಕಾಂಗ್ರೆಸ್ ಪಕ್ಷವು “ಕಲ್ಯಾಣ ಕರ್ನಾಟಕ ಪ್ರದೇಶ”ದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ, 2013ರ ಡಿಸೆಂಬರ್ ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಾರಿಗೆ ತಂದಿದ್ದ “ವಿಧಿ 371 ಜೆ’ ಯಲ್ಲಿನ ಎಲ್ಲಾ ಸಾಂವಿಧಾನಿಕ ನಿಬಂಧನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಮೂಲಕ ಈ ಪ್ರದೇಶದ ಜನರ, ವಿಶೇಷವಾಗಿ ಯುವಕರ ಜೀವನವನ್ನು ಸ್ವಾವಲಂಭಿಯಾಗಿಸುವ ಭರವಸೆಯನ್ನು ನಾವು ನೀಡುತ್ತಿದ್ದೇವೆ.
2. ಕಾಂಗ್ರೆಸ್ ಪಕ್ಷವು ಕಲ್ಯಾಣ ಕರ್ನಾಟಕ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ
ಪ್ರತಿ ವರ್ಷ 5,000 ಕೋಟಿ ರೂ.ಗಳನ್ನು ಮೀಸಲಿಡುವ ಆಶ್ವಾಸನೆಯನ್ನು ನೀಡುತ್ತಿದೆ.
3. 2023ರಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದ 12 ತಿಂಗಳೊಳಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಭರ್ತಿಯಾಗದೇ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳೂ ಸೇರಿದಂತೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಬದ್ಧವಾಗಿದೆ.
4. ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು, ಈ ಭಾಗದ ಆರ್ಥಿಕ ಪ್ರಗತಿಗಾಗಿ, ಭೂಮಿ ಹಂಚಿಕೆ, ವಿದ್ಯುತ್ ಮತ್ತು ನೀರಿಗೆ ವಿಶೇಷ ದರ ಹಾಗೂ ತೆರಿಗೆ ವಿನಾಯಿತಿಯೊಂದಿಗೆ ಕೈಗಾರಿಕಾ ಕಾರಿಡಾರ್ ಗಳನ್ನು ನಿರ್ಮಿಸಲು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಮರ್ಪಿತವಾದ “ಕೈಗಾರಿಕಾ ನೀತಿ”ಯನ್ನು ರೂಪಿಸುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡುತ್ತದೆ. 5 ವರ್ಷಗಳ ಅವಧಿಯಲ್ಲಿ “ಕಲ್ಯಾಣ ಕರ್ನಾಟಕ”ಭಾಗದಲ್ಲಿ 1 ಲಕ್ಷ ಉದ್ಯೋಗವನ್ನು ಖಾಸಗಿ ವಲಯವೊಂದರಲ್ಲೇ ಸೃಷ್ಟಿಸುವ ಆಶ್ವಾಸನೆಯನ್ನು ನೀಡುತ್ತಿದ್ದೇವೆ.
5. ಕಲ್ಯಾಣ ಕರ್ನಾಟಕ ಪ್ರದೇಶದ ‘ಕೃಷ್ಣಾ ಜಲಾನಯನ ಪ್ರದೇಶ’ ಮತ್ತು ‘ಗೋದಾವರಿ ಜಲಾನಯನ ಪ್ರದೇಶ’ದ ಎಲ್ಲಾ ಅಪೂರ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ ರಚನೆಯಾದ 24 ತಿಂಗಳೊಳಗೆ ಕಾಮಗಾರಿ ಕೈಗೆತ್ತಿಕೊಳ್ಳುವ ಆಶ್ವಾಸನೆ ನೀಡುತ್ತಿದ್ದೇವೆ.
ತುಂಗಭದ್ರಾ ಜಲಾಶಯದ ಹೂಳು ತೆಗೆಯುವುದೂ ಸೇರಿದಂತೆ ಎಲ್ಲಾ ಹೊಸ ಕಾರ್ಯಸಾಧ್ಯ ನೀರಾವರಿ ಯೋಜನೆಗಳನ್ನು “ವಿಶೇಷ ಪ್ಯಾಕೇಜ್” ಅಡಿಯಲ್ಲಿ ಕೈಗೊಳ್ಳಲಾಗುವುದು.
6. ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ರಾಜ್ಯದ ಕೇಂದ್ರ ಪ್ರದೇಶ ಬೆಂಗಳೂರಿಗೆ ತ್ವರಿತ ಸಂಪರ್ಕ ಕಲ್ಪಿಸಲು ಮತ್ತು ಚಲನಶೀಲತೆಗೆ ಅನುಕೂಲವಾಗುವಂತೆ ಚತುಷ್ಪಥ ರಸ್ತೆ ನಿರ್ಮಿಸುವ ಆಶ್ವಾಸನೆಯನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ.
7. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ” (IIT) ಮತ್ತು “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್” (IIM) ಸ್ಥಾಪಿಸುವ ಮೂಲಕ ಈ ಪ್ರದೇಶದ ಯುವಕರ ಆಶೋತ್ತರಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷವು ಬದ್ಧವಾಗಿದೆ ಎಂಬ ಭರವಸೆಯನ್ನು ನೀಡುತ್ತಿದೆ.
ಕಾಂಗ್ರೆಸ್ ಪಕ್ಷವು ಅಧಿಕಾರ ವಹಿಸಿಕೊಂಡ 24 ತಿಂಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 41 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 100 ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸುವ ಆಶ್ವಾಸನೆಯನ್ನು ನೀಡುತ್ತದೆ.
ಮಹಿಳೆಯರ ಉನ್ನತ ಶಿಕ್ಷಣ ಉತ್ತೇಜಿಸಲು, ಕಾಂಗ್ರೆಸ್ ಪಕ್ಷವು ಕಲ್ಯಾಣ ಕರ್ನಾಟಕ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ “ಮಹಿಳಾ ಪದವಿ ಕಾಲೇಜು” ಸ್ಥಾಪನೆ ಖಾತ್ರಿ ಪಡಿಸಲು ಕೆಲಸ ಮಾಡಲಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಗತ್ಯ ಸಬ್ಸಿಡಿ ಮತ್ತು ಸರ್ಕಾರದ ಬೆಂಬಲದೊಂದಿಗೆ ಶೈಕ್ಷಣಿಕ, ತಾಂತ್ರಿಕ ಮತ್ತು ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸಲು, ಪ್ರತಿಷ್ಠಿತ ಖಾಸಗಿ ಸಂಸ್ಥೆಗಳನ್ನು ಉತ್ತೇಜಿಸಲು ಕಾಂಗ್ರೆಸ್ ಪಕ್ಷ ಸರ್ಕಾರವು ಹೊಸ “ವಿಶೇಷ ಶಿಕ್ಷಣ ವಲಯ ನೀತಿ”ಯನ್ನು ಹೊರತರಲಿದೆ.
ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಆಂಗ್ಲ ಭಾಷಾ ತರಬೇತಿ ನೀಡಲು ಸಹಕಾರಿಯಾಗುವಂತೆ ಪ್ರತಿ ಹೋಬಳಿಗೆ ಒಂದು “ಬಾಬಾಸಾಹೇಬ್ ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ – ಪ್ರೌಢ ಶಿಕ್ಷಣ ಶಾಲೆ” ಸ್ಥಾಪಿಸಲು ಕಾಂಗ್ರೆಸ್ ಪಕ್ಷ ಪ್ರಸ್ತಾವನೆ ನೀಡುತ್ತಿದೆ.
8. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ‘ಶಿಶು ಮರಣ ಪ್ರಮಾಣ’ ಹಾಗೂ ‘ಅಪೌಷ್ಟಿಕತೆ’ಯ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ 41 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ “ತಾಯಿ ಮತ್ತು ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ” ಸ್ಥಾಪಿಸುವುದಾಗಿ ಕಾಂಗ್ರೆಸ್ ಪಕ್ಷವು ಆಶ್ವಾಸನೆ ನೀಡುತ್ತಿದೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಉಪಕರಣಗಳು ಹಾಗೂ ಸಾಕಷ್ಟು ವೈದ್ಯಕೀಯ ಸಿಬ್ಬಂದಿಯೊಂದಿಗೆ “ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರ”ಗಳನ್ನು ಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ “ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ” (AIIMS) ಸ್ಥಾಪಿಸಲು ಶ್ರಮಿಸುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡುತ್ತದೆ.
9. ಪ್ರತಿ ಕುಟುಂಬದ ಜೀವನ ಮಟ್ಟವನ್ನು ಸುಧಾರಿಸಲು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ “ಪ್ರತಿ ಬಡ ಕುಟುಂಬಕ್ಕೆ ಮನೆ” ಎಂಬ ಕನಸನ್ನು ಈಡೇರಿಸುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡುತ್ತಿದೆ.
10. ಕಲ್ಯಾಣ ಕರ್ನಾಟಕ ಪ್ರದೇಶದ ಹಳ್ಳಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎಲ್ಲಾ “ಗ್ರಾಮ ಪಂಚಾಯತಿಗಳಿಗೆ ವಾರ್ಷಿಕ 1 ಕೋಟಿ ರೂ.ಗಳನ್ನು” ಮೀಸಲಿಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ.