’ಕಾಯಕ ದಾಸೋಹಗಳ ಸಮರಸದ ಕ್ರಿಯೆ’

0
95

ಮಹಾದಾಸೋಹಿ ಶರಣಬಸವೇಶ್ವರರು ಕಾಯಕ ದಾಸೋಹಗಳ ಸಮರಸದ ಕ್ರಿಯೆಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸಾರಿಕಾದೇವಿ ಕಾಳಗಿ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಬಸವಕಲ್ಯಾಣದತ್ತ ಹೊರಟ ಶರಣಬಸವರು ಕಲಬುರಗಿಯ ಆದಿದೊಡ್ಡಪ್ಪ ಶರಣರ ಮಹಾಮನೆಯಲ್ಲಿ ಉಳಿಯುತ್ತಾರೆ. ದರ್ಶನಕ್ಕೆ ಬರುವ ಭಕ್ತ ಸಮೂಹಕ್ಕೆ ದೊಡ್ಡಪ್ಪ ಶರಣರು ದಾಸೋಹ ಕೈಗೊಳ್ಳಬೇಕಾಗುತ್ತದೆ. ದಾಸೋಹಕ್ಕಾಗಿ ಮನೆಯಲ್ಲಿ ಕಾಳುಕಡ್ಡಿಗಳೆಲ್ಲ ಮುಗಿಯುತ್ತವೆ. ಹೊರಗಿನಿಂದ ದುಡ್ಡು ಕೊಟ್ಟು ತರಸಿದರೂ ಅವರು ಸಾಕಾಗುವುದಿಲ್ಲ. ಶರಣರ ದಾಸೋಹಕ್ಕೆ ಕುಂದು ಬರುತ್ತದೆಂದು ಸತಿಪತಿ ಮತ್ತೊಬ್ಬರ ಹೊಲದಲ್ಲಿ ದುಡಿಯಲು ಸಿದ್ದರಾಗುತ್ತಾರೆ. ಇದನ್ನೆಲ್ಲ ಅರಿತ ಶರಣರು ನಾನು ಧನ್ಯ ಎನ್ನುತ್ತ ಕಲ್ಯಾಣವೇಕೆ ? ನನಗೆ ಕೈಲಾಸವು ಬೇಡ ಕೊನೆಯತನಕ ಇವರ ಮಹಾಮನೆಯಲ್ಲಿಯೇ ಉಳಿಯುತ್ತೇನೆಂದು ಅಂದುಕೊಳ್ಳುತ್ತಾರೆ. ಹೊತ್ತು ಹೊಂಡುವತನಕ ಮನೆಯಲ್ಲಿ ಎಲ್ಲಿ ನೋಡಿದರೂ ದವಸಧಾನ್ಯಗಳ ಚೀಲಗಳು, ಹಗೆಗಳು ತುಂಬಿರುತ್ತವೆ ಎಲ್ಲವೂ ದಾಸೋಹಕ್ಕಾಗಿ ಬಳಸಿ ಶರಣರ ಕೃಪೆಗೆ ಪಾತ್ರರಾಗುತ್ತಾರೆ.

ಶರಣಬಸವರು ಮಹಾಮನೆಯ ಹೊರಗಿರುವ ಕಲ್ಲಿನ ಮೇಲೆ ಗಂಟೆಗಟ್ಟಲೆ ತ್ರಿಕಾಲಪೂಜೆ ಮಾಡುತ್ತಿದ್ದರು. ಆ ಕಲ್ಲು ಇದ್ದದ್ದು ತಿಪ್ಪೆಯ ನಡುವೆ. ಅವರಲ್ಲಿಗೆ ಬಂದ ಭಕ್ತನೊಬ್ಬ ’ ಯಪ್ಪಾ ಅಲ್ಲೇಕೆ ಕೂಡುತ್ತಿದ್ದಿರಿ ಅದು ತಿಪ್ಪೆ’ ಎಂದಾಗ ಶರಣರು ’ತಿಪ್ಪೆಯಲಪ್ಪಾ ಮುಂದಿನ ದಿನಗಳಲ್ಲಿ ಭಕ್ತಿಯ ಹೊನ್ನ ಇಲ್ಲಿ ಹರಿಯುವದು’ ಎಂದರಂತೆ. ಕಳ್ಳರು ಸ್ವಚ್ಛಗೊಳಿಸಿದ ತಿಪ್ಪೆಯ ಆಳದಲ್ಲಿ ಹಾಲು ಭರಿಸುತ್ತಾರೆ. ಶರಣಬಸವರು ತಾವು ಲಿಂಗೈಕ್ಯರಾದಾಗ ತಮ್ಮ ಸಂಸ್ಕಾರ ಅಲ್ಲಿಯೇ ಮಾಡಬೇಕೆಂದು ಆದಿದೊಡ್ಡಪ್ಪ ಶರಣರಿಗೆ ತಿಳಿಸುತ್ತಾರೆ. ಅವರ ಮಾತಿನಂತೆ ಅಲ್ಲಿಯೇ ಅವರ ಸಂಸ್ಕಾರವಾಗುತ್ತದೆ. ಮುಂದೆ ಭವ್ಯವಾದ ದೇವಾಲಯವಾಗಿ ಭಕ್ತಿಯ ಹೊನಲು ಹರಿಯುತ್ತದೆ.

ಮಹಾಮನೆಯ ಹಿಂದಿರುವ ಶರಣರ ಭಕ್ತರಾದ ದೇಶಮುಖರ ಮಡದಿಗೆ ಮಕ್ಕಳಿಲಿಲ್ಲ ಎನ್ನುವ ಚಿಂತೆಯಲ್ಲಿ ರೋಗಕ್ಕೆ ತುತ್ತಾಗಿ ಸಾಯುವ ಸ್ಥಿತಿಗೆ ಬರುತ್ತಾಳೆ. ಆಗ ಶರಣರು ವಿಭೂತಿಯನ್ನು ತಂದು ಆಕೆಯ ಹಣೆಗೆ ಹಚ್ಚುತ್ತಾರೆ. ಅಲ್ಲದೆ ಅದನ್ನು ಆಕೆಯ ಉಡಿಯೊಳಗೆ ಹಾಕಿ ದಿನಾಲು ನೀರಿನಲ್ಲಿ ಹಾಕಕೊಂಡು ಕುಡಿಯಲು ತಿಳಿಸುತ್ತಾರೆ. ಕೆಲವೇ ದಿನಗಳಲ್ಲಿ ಅವಳು ಗುಣಮುಖಗಳಾಗುವುದಲ್ಲದೆ ರೋಗಮುಕ್ತರಾಗುತ್ತಾಳೆ. ಶರಣರಲ್ಲಿಗೆ ಬಂದ ಅವಳು ’ ಯಪ್ಪಾ ಜೀವ ಕೊಟ್ಟಿರಿ ಉಡಿ ತಣ್ಣಗ ಮಾಡಿರಿ’ ಎಂದು ಕೇಳಿಕೊಂಡಾಗ ವರ್ಷದೊಳಗೆ ಗಂಡು ಸಂತಾನವಾಗುತ್ತದೆ.
ಕಿತ್ತೂರಿನ ರಾಣಿ ಚನ್ನಮ್ಮ ಮತ್ತು ಅವಳ ಗಂಡ ಮಲ್ಲಸರ್ಜ ಶರಣರಲ್ಲಿ ಬಂದು ತಮಗೊಬ್ಬ ಮಗನನ್ನು ಕೊಟ್ಟು ಕಿತ್ತೂರು ವಂಶವನ್ನು ಕಾಪಾಡು ತಂದೆ ಕೇಳಿಕೊಳ್ಳುತ್ತಾಳೆ. ಶರಣರು ಆಶೀರ್ವಾದ ರೂಪದಲ್ಲಿ ಕಾರಿಕವೊಂದನ್ನು ಅವಳ ಉಡಿಯೊಳಗೆ ಹಾಕಿ ಆಶೀರ್ವದಿಸುತ್ತಾರೆ. ಮುಂದಿನ ದಿನಗಳಲ್ಲಿ ಚನ್ನಮ್ಮ ಗಂಡು ಮಗುವಿನ ತಾಯಿಯಾಗುತ್ತಾಳೆ.

ಕೆಳದಿರಾಣಿಯು ಶರಣರ ದರ್ಶನಕ್ಕೆ ಬಂದ ವಿಷಯ ಹೈದರಾಲಿಗೆ ತಿಳಿಯುತ್ತದೆ. ಹೇಗಾದರೂ ಅವಳನ್ನು ಮುಗಿಸಬೇಕೆಂದು ಕಲಬುರ್ಗಿಗೆ ಬರುತ್ತಾನೆ. ಈ ವಿಷಯ ಶರಣರಿಗೆ ತಿಳಿಯುತ್ತದೆ. ಶರಣರು ಅವನಿಗೆ ಬುದ್ಧಿ ಹೇಳುತ್ತಾರೆ. ಆದರೂ ಅವನು ತನ್ನ ಅಹಂಕಾರ ಬಿಡುವುದಿಲ್ಲ. ಹರದಾರಿ ದಾಟುವದರಲ್ಲಿ ಹೈದರಾಲಿಗೆ ನೀರಡಿಕೆಯಾಗುತ್ತದೆ. ಸಮೀಪದಲ್ಲಿರುವ ಬಾವಿಯಲ್ಲಿರುವ ನೀರನ್ನು ಸೇವಕರಿಗೆ ತರಲು ಹೇಳಿದಾಗ ಅಲ್ಲಿಯ ನೀರು ಬತ್ತಿಹೋಗುತ್ತವೆ. ನೀರು ಸಿಗದೆ ಸಾಯುವ ಪರಿಸ್ಥಿತಿಗೆ ಬಂದಾಗ ಅವನಿಗೆ ಶರಣರ ಮಾತುಗಳು ಅರಿವಾಗಿ ಅವರಲ್ಲಿಗೆ ಬಂದು ಶರಣಾಗುತ್ತಾನೆ. ಆಗ ಶರಣರು ಅವನಿಗೆ ನೀರು ಮಜ್ಜಿಗೆ ಕೊಟ್ಟು ಆಶೀರ್ವದಿಸುತ್ತಾರೆ ಎಂದು ಹೇಳಿದರು.

ಡಾ.ಸಾರಿಕಾದೇವಿ, ಸಹ ಪ್ರಾಧ್ಯಾಪಕಿ 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here