ಮಾದನಹಿಪ್ಪರಗಿ: ದೇಶಕ್ಕೆ ಅನ್ನ ನೀಡುವ ರೈತಾಪಿ ಜನರು ಇಂದು ಸಾಲದಿಂದ ಮುಕ್ತರಾಗಲು ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಲು ಸಾವಯವ ಕೃಷಿ ಪದ್ದತಿ ಮೈಗೂಡಿಸಿಕೊಳ್ಳಬೇಕು ಎಂದು ಖಜೂರಿ ಕೋರಣೇಶ್ವರ ವಿರಕ್ತ ಮಠದ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಕರೆ ನೀಡಿದರು.
ಆಳಂದ ತಾಲೂಕಿನ ಮಾದನಹಿಪ್ಪರಗಿ ಶಿವಲಿಂಗೇಶ್ವರ ವಿರಕ್ತ ಮಠದ ಲಿಂ. ಶಾಂತಲಿಂಗ, ಲಿಂ. ಶಿವಲಿಂಗ ಉಭಯ ಶ್ರೀಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಜಾನುವಾರಗಳ ಜಾಗೃತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಸರಕಾರ ನೀಡುವ ಸಾಲಗಳು ಕೃಷಿಗೆ ಬಳಸಿಬೇಕೆ ಹೊರತು ಬೇರೆ ಕೆಲಸಕ್ಕೆ ಉಪಯೋಗಿಸಬಾರದು. ಇದೇ ರೀತಿ ಅನೇಕ ಸೌಲಭ್ಯಗಳು ಫಲಾನುಭವಿಗಳಿಗೆ ನೀಡುವಾಗ ಅಧಿಕಾರಿಗಳು ನೈಜತೆ ಪರಿಶೀಲಿಸಿ ಕೊಡಬೇಕು ಎಂದು ತಿಳಿಸಿದ ಅವರು, ಲಿಂಗೈಕ್ಯ ಶಿವಲಿಂಗ ಶಿವಯೋಗಿಗಳ ಸಮಾಜಮುಖಿ ಕಾರ್ಯಗಳು ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಮುಂದುವರೆಸಿಕೊಂಡು ಬರುತ್ತಿರುವದು ಇದಕ್ಕೆ ಶ್ರೀಮಠದ ಭಕ್ತರ ಸಹಕಾರವೇ ಮುಖ್ಯ ಎಂದರು.
ಹೊದಲೂರಿನ ವೃಷಭೇಂದ್ರ ಸ್ವಾಮೀಜಿ, ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಸಮ್ಮುಖವಹಿಸಿ ಮಾತನಾಡಿ, ಗಡಿನಾಡಿನಲ್ಲಿ ಮಠದ ಅಭಿವೃದ್ಧಿ ಜತೆಗೆ ಭಕ್ತರಿಗೆ ಸಂಸ್ಕಾರ ನೀಡುವ ಕಾರ್ಯ ಶ್ರೀಮಠ ಮಾಡುತ್ತಿದೆ. ಉಭಯ ಪೂಜ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ತ ಜಾನುವಾರಗಳ ಜಾಗೃತಿ, ರಕ್ತದಾನ, ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಶ್ರೀಮಠ ವಿಧಾಯಕ ಕಾರ್ಯ ಮಾಡುತ್ತಿದೆ ಎಂದರು. ಪಶು ಇಲಾಖೆಯ ಅಧಿಕಾರಿ ಡಾ. ಯಲ್ಲಪ್ಪ ಇಂಗಳೆ ಮಾತನಾಡಿ, ರೈತರು ಗುಡಿ ಕೈಗಾರಿಕೆ ಮತ್ತು ಕೃಷಿ ಜೊತೆಗೆ ಹೈನುಗಾರಿಕೆ ಕುರಿಸಾಕಾಣಿಕೆ ಕೋಳಿ ಸಕಾಣಿಕೆ ಮಾಡುತ್ತ ಆರ್ಥಿಕವಾಗಿ ಬೆಳೆಯಬೇಕು.
ಈ ವರ್ಷ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹೆಚ್ಚಾಗಿ ಬಂದಿರುವದರಿಂದ ತಮ್ಮ ಜಾನುವಾರುಗಳಿಗೆ ಸಮೀಪದ ಪಶುಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮಾಡಬೇಕು. ಹೈನುಗಾರಿಕೆ, ಗುಡಿಕೈಗಾರಿಕೆ, ಕೋಳಿ, ಕುರಿ, ಆಕಳು ಸಾಕಾಣಿಕೆ ಮಾಡಿದರೆ ಇದು ಕೃಷಿಗೆ ಜೋಡು ದಂಧೆ ಇದರಿಂದಲೂ ಹೆಚ್ಚಿನ ಆದಾಯ ಸಾಧ್ಯ. ಶ್ರೀಮಠ ಧರ್ಮ ಜಾಗೃತಿಯೊಂದಿಗೆ ಭಕ್ತರ, ರೈತರ, ಜಾನುವಾರಗಳ ಹಿತವನ್ನು ಮಾಡುವ ಕಾರ್ಯಗಳು ಮಾಡುತ್ತಿದೆ ಎಂದರು.
ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, ಚಿಂಚೋಳಿ ಗದ್ದುಗೇಶ್ವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಯೋಗಾಶ್ರಮದ ಶಿವದೇವಿ ಮಾತಾಜಿ, ಕಲಬುರಗಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಪಶು ವೈದ್ಯಾಧಿಕಾರಿ ಡಾ. ಮಹಾಂತೇಶ ಪಾಟೀಲ್, ಡಾ. ಶ್ರೀಕಾಂತ ತಟ್ಟೆ, ಕೇರೂರಿನ ರಾಹುಲ್ ಪಾಟೀಲ್, ಬೀರಣ್ಣಾ ಕಡಗಂಚಿ, ಸತೀಶ ಫನಶೆಟ್ಟಿ, ಕಲ್ಯಾಣಿ ಬ್ಯಾಗೆಳ್ಳಿ, ಗುಂಡುರಾವ ಉದ್ದನಶೆಟ್ಟಿ ಸೇರಿದಂತೆ ಇತರರು ಭಾಗವಹಿಸಿದರು. ಯಾಸೀನ್ ಚಪ್ಪು ಸ್ವಾಗತಿಸಿದರು. ಮಲ್ಲಿಕಾರ್ಜುನ ಎಲಿಕೇರಿ ನಿರೂಪಿಸಿದರು. ಬಂಡಯ್ಯ ಶಾಸ್ತ್ರೀ ಪ್ರವಚನ ನೀಡಿದರು. ವೀರಭದ್ರಯ್ಯ ಸಂಗೀತ, ಸಂತೋಷ ಕೊಲ್ಡಿ ತಬಲಾ ಸಾಥ್ ನೀಡಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.