ಆ. 10 ರಿಂದ ಮಹಾದೇವಿಯಕ್ಕಗಳ ಸಮ್ಮೇಳನ

0
127

ಕಲಬುರಗಿ: ಆಡಾಡುತ್ತ ಪ್ರಾರಂಭವಾದ ಮಹಾದೇವಿಯಕ್ಕಗಳ ಸಮ್ಮೇಳನಕ್ಕೆ ಈಗ 12ರ ಪ್ರಾಯ. ಸಮ್ಮೇಳನ ಪ್ರಾರಂಭ ಮಾಡಿದ್ದೇ ಗೃಹಿಣಿಯರಿಗಾಗಿ. ಅವರು ನಿಸ್ವಾರ್ಥದಿಂದತಮ್ಮನ್ನು ಮನೆಗೆ, ಸಮಾಜಕ್ಕೆ, ಶೈಕ್ಷಣಿಕ ಪ್ರಗತಿಗೆ.ಧಾರ್ಮಿಕತೆಗೆ ಮತ್ತು ನೈತಿಕತೆಗೆ ಸಮರ್ಪಿಸಿ ಕೊಂಡಿರುತ್ತಾರೆ. ವೈಯಕ್ತಿಕವಾಗಿತಮ್ಮ ಬಗ್ಗೆ ಎಂದೂ ಯೋಚಿಸದ ಹೆಣ್ಣಿನ ಸಮರ್ಪಣೆಗೆ ಸಿಗುವ ಮನ್ನಣೆ  ಅಷ್ಟ ಕಷ್ಟೆ, ಈ ಹಿನ್ನೆಲೆಯಲ್ಲಿ ನಾವು ಅಂತಹಅಪರೂಪದ ಹೆಣ್ಣುಮಕ್ಕಳನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಈ ಸಮ್ಮೇಳನದ ಮೂಲಕ ಮಾಡುತ್ತ ಬಂದಿದ್ದೇವೆ ಎಂದು ಡಾ. ವಿಲಾಸವತಿ ಖೊಬಾ ಅವರು ತಿಳಿಸಿದರು.

ಇಂದು ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಪಾತ್ರರಾದವರು ಮಹಾದಾಸೋಹ ಪರಂಪರೆಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರು. ಅವರ ತ್ಯಾಗ ಧಾರ್ಮಿಕತೆ ದಾಸೋಹ ಕೈಂಕರ್ಯವನ್ನು ಗಮನಿಸಿ ಮಹಾದೇವಿಯಕ್ಕಗಳ ಸಮ್ಮೇಳನ-12ರ ಸರ್ವಾಧ್ಯಕ್ಷರನ್ನಾಗಿ ನಾವೆಲ್ಲ ಗೌರವಾದರದಿಂದ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

Contact Your\'s Advertisement; 9902492681

ಇದು ಹೆಣ್ಣು ಮಕ್ಕಳ ಕ್ರಿಯಾಶೀಲತೆ ಅಭಿವ್ಯಕ್ತಿಗಾಗಿ ಮೀಸಲಾದ ಸಮ್ಮೇಳನ. 2 ದಿನ ನಡೆಯುವ ಈ ಸಮ್ಮೇಳನದಲ್ಲಿ ಹಿರಿಯರು, ಮಧ್ಯ ವಯಸ್ಸಿನ ಸುಮಾರು 85 ಜನ ಹೆಣ್ಣು ಮಕ್ಕಳು ಮತ್ತು 85 ಜನ ವಿದ್ಯಾರ್ಥಿನಿಯರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನ ಉದ್ಘಾಟನೆ ಸಮಾರೋಪಗಳ ಜೊತೆಗೆ 5 ಗೋಷ್ಠಿಗಳು ಬೌದ್ಧಿಕ ವಿಕಾಸಕ್ಕೆ ಮೀಸಲಾಗಿವೆ. ಮನಸ್ಸಿನ ಉಲ್ಲಾಸಕ್ಕಾಗಿ 5 ಹಂತಗಳಲ್ಲಿ ವಿಭಿನ್ನರೂಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹೀಗೆ ತಮ್ಮ ಸುಪ್ತ ಪ್ರತಿಭೆಯನ್ನು ಹಂಚಿಕೊಳ್ಳುವ ಸುಮಾರು 160ಕ್ಕೂ ಮೇಲ್ಪಟ್ಟ ಹೆಣ್ಣುಮಕ್ಕಳು, ಮಕ್ಕಳು ಕಲಬುರಗಿ ಬೀದರ, ಜೇವರ್ಗಿ ಚಿಂಚೋಳಿ, ಬೆಂಗಳೂರಿನವರಾಗಿರುತ್ತಾರೆ ಎಂದರು.

ದಾಂಪತ್ಯದ ಔನತ್ಯ, ಮಾತು,  ವ್ಯಕ್ತಿತ್ವ, ಆರೋಗ್ಯ, ಸೌಹಾರ್ದ ಬದುಕು ಮತ್ತು ಸಾಮರಸ್ಯದ ತಾತ್ವಿಕ ಚಿಂತನೆಗಾಗಿ ಶರಣ ಸಂತ ಸೂಫಿ ಚಿಂತನ ಗೋಷ್ಠಿಗಳು, ಕವಿಗೋಷ್ಠಿ ಸಮ್ಮೇಳನದಲ್ಲಿರುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಚನ ನೃತ್ಯ, ವಚನ ಗಾಯನ, ಜಾನಪದ ಹಾಡುಗಳು, ಮುಸ್ಲೀಮ ತತ್ತ್ವಪದಕಾರರ ತತ್ತ್ವಪದಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡುವ, ಅದಕ್ಕೆ ತಕ್ಕ ಚಿತ್ರ ಬಿಡಿಸುವ, ರೂಪಕ, ಕೋಲಾಟಗಳು ಇರುತ್ತವೆ.

ಪ್ರತಿ ವರ್ಷವೂ ಒಂದೊಂದು ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಹೆಣ್ಣು ಮಕ್ಕಳನ್ನು ಮತ್ತು ಒಂದೊಂದು ಸಾರೆ ಸಾಧನೆ ಗೈದ ವಿದ್ಯಾರ್ಥಿನಿಯರನ್ನು ಗುರುತಿಸಿ ಗೌರವ ಸನ್ಮಾನವನ್ನು ಮಾಡುತ್ತ ಬಂದಿದ್ದೇವೆ. ಈ ವರ್ಷ ಈ ಭಾಗದ ಹಿರಿಯ ಚಿತ್ರ ಕಲಾವಿದೆಯರನ್ನು ಗೌರವಿಸಿ ಸನ್ಮಾನಿಸುತ್ತಿದ್ದೇವೆ. ನಮ್ಮ ಭಾಗ ಯಾವುದರಲ್ಲೂ ಹಿಂದೆ ಇಲ್ಲ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಲಿದೆ.

2015ರಿಂದ ’ವೈರಾಗ್ಯನಿಧಿ ಅಕ್ಕ ಪ್ರಶಸ್ತಿ’ಯನ್ನು ವಿಶೇಷ ಸಾಧನೆಗೈದ ಹೆಣ್ಣುಮಕ್ಕಳಿಗೆ ನೀಡಿ ಗೌರವಸಿದ್ದೇವೆ. ಈ ವರ್ಷ ಈ ಪ್ರಶಸ್ತಿಗೆ ಭಾಜನರಾದವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ ಅವರು. ಬೆಂಗಳೂರಿನ ಬಸವೇಶ್ವರ ವೃತ್ತದಿಂದ ವಿಧಾನಸೌಧದ ವರೆಗೆ ಬಸವಾದಿ ಶರಣರ ವಚನಗಳನ್ನು ದಾರಿಯುದ್ದಕ್ಕೂ ಅಳವಡಿಸುವ ಬೃಹತ್‌ ಯೋಜನೆಯೊಂದನ್ನು ಅವರು ಹಾಕಿ ಕೊಂಡಿದ್ದಾರೆ. ಅವರ ಕ್ರಿಯಾ ಯೋಜನೆಗಳಿಗೆ ಇನ್ನಷ್ಟು ಸ್ಫೂರ್ತಿ ತುಂಬಲಿ ಎಂದು ಈ ಪ್ರಶಸ್ತಿಯನ್ನು ಅವರಿಗೆ ಕೊಡಮಾಡಲಾಗುತ್ತಿದೆ.

ಧ್ವಜಾರೋಹಣ ಮಾಜಿ ಶಾಸಕಿ ಅರುಣಾ ಪಾಟೀಲ ಅವರಿಂದ ನೆರವೇರಲಿದೆ. ಇದರ ನಂತರ ಮಹಾದೇವಿಯಕ್ಕಗಳ ಭಾವಚಿತ್ರದ ಮೆರವಣಿಗೆ ಬೆಳಿಗ್ಗೆ 8.30 ಗಂಟೆಗೆ ಶ್ರೀ ಶರಣ ಬಸವೇಶ್ವರ ದಾಸೋಹ ಮಹಾಮನೆಯಿಂದ ದೇವಸ್ಥಾನದ ಪ್ರವೇಶ ದ್ವಾರದವರೆಗೆ,  ನಂತರ ಸೇಡಂ ರಸ್ತೆಯ ಜಯನಗರದ ಮೊದಲ ಕ್ರಾಸ್ (ಬಾವ್ಗಿ ಅಂಗಡಿ ಎದುರುಗಡೆಯಿಂದ) ಅನುಭವ ಮಂಟಪದ ವರೆಗೆ ನಡೆಯಲಿದೆ. ಉದ್ಘಾಟನೆ ಮಧುರಾ ಅಶೋಕ ಅವರು ನಡೆಸಿಕೊಡುತ್ತಾರೆ. ಡಾ. ಲೀಲಾದೇವಿ ಆರ್. ಪ್ರಸಾದ ಅವರೂ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here