ಕಲಬುರಗಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು.ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶದ ಬೆನ್ನೆಲುಬು ರೈತರು ಕಳೆದ ಎರಡು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.ಒಂದು ಕಡೆ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಯಾದರೆ, ಇನ್ನೊಂದೆಡೆ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲ.ಮಧ್ಯವರ್ತಿಗಳ ಹಾವಳಿಯಿಂದ ಬೆಳೆಗೆ ಸರಿಯಾದ ಬೆಲೆ ದೊರಕುತ್ತಿಲ್ಲ. ಸರಕಾರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ತೆರೆಯುತ್ತಿಲ್ಲ.ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಕಲಬುರಗಿ ಜಿಲ್ಲೆಯ ವಾಣಿಜ್ಯ ಬೆಳೆ ತೊಗರಿಗೆ ನೆಟೆ ರೋಗ ತಟ್ಟಿ ಸಂಪೂರ್ಣ ಹಾಳಾಗಿದ್ದು,ರೈತರು ಇನ್ನಷ್ಟು ತೊಂದರೆಗೆ ಸಿಲುಕಿದ್ದಾರೆ.ಆದರೆ ಸರಕಾರ ಹಾಗೂ ಬೆಳೆ ವಿಮೆ ಕಂಪನಿಗಳು ಕ್ಯಾರೇ ಅನ್ನುತ್ತಿಲ್ಲ.ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ.ಈ ವಿಷಯ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ನಡೆಬೇಕು.
ನಿಜವಾಗಿ ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ ರೈತರ ಹೆಸರಲ್ಲಿ ಭವಿಷ್ಯ ನಿಧಿ ಸ್ಥಾಪಿಸಬೇಕು.ಬಡ ರೈತರ ಮಕ್ಕಳಿಗೆ ಸರಕಾರಿ ನೌಕರಿ ನೀಡಲು ವಿಶೇಷ ಮೀಸಲಾತಿ ನೀಡುವ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಬೇಕು.ರಾಷ್ಟ್ರೀಕತ ಬ್ಯಾಂಕ್ ಗಳಲ್ಲಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
ಕುಟುಂಬಕ್ಕೊಂದು ಉಚಿತವಾಗಿ 10 ಲಕ್ಷದಷ್ಟು ಜೀವ ವಿಮೆ ಮಾಡಿಸಬೇಕು.ನೀರಾವರಿ ಜಮೀನುಗಳಲ್ಲಿ 10 ಹೆಚ್ ಪಿ ವರೆಗಿನ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು.ರಾಜ್ಯಾದ್ಯಂತ ಕಬ್ಬಿನ ಬೆಳೆಗೆ ಏಕರೂಪದ ದರವನ್ನು ರಾಜ್ಯ ಸರ್ಕಾರ ನಿಗದಿ ಮಾಡಬೇಕು.ರೈತರಿಗೆ ಕಬ್ಬಿನ ಹಣ ಪಾವತಿಸದೆ ಸತಾಯಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.