ಶಹಾಬಾದ: ಸಮಾಜದಲ್ಲಿ ಸರ್ವ ಧರ್ಮಿಯರು ಒಂದಾಗಿ ಬದುಕಿದರೆ ದೇಶದಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯ ಎಂದು ಸೇಂಟ್ ಥಾಮಸ್ ಚರ್ಚನ ಧರ್ಮ ಗುರುಗಳಾದ ಡಾ. ಸ್ಟ್ಯಾನಿ ಗೋವಿಯಸ್ ಹೇಳಿದರು.
ಅವರು ರವಿವಾರ ನಗರದ ಸೇಂಟ್ ಥಾಮಸ್ ಚರ್ಚನಲ್ಲಿ ಆಯೋಜಿಸಲಾದ ಸರ್ವ ಧರ್ಮ ಸಮ್ಮೇಳನ ಹಾಗೂ ಸರ್ವಧರ್ಮದ ಕ್ರಿಸ್ಮಸ್ ಸ್ನೇಹ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಅಶಾಂತಿ ಮೂಡುತ್ತಿದೆ.ಕಲಹಗಳು ಹೆಚ್ಚಾಗುತ್ತಿವೆ.ಅದನ್ನು ತೊಲಗಿಸಬೇಕಾದರೆ ಸರ್ವ ಧರ್ಮಿಯರು ಧರ್ಮದ ನಿಜವಾದ ಅರ್ಥವನ್ನು ತಿಳಿದುಕೊಂಡು ನಡೆಯಬೇಕಾಗಿದೆ.ಅದು ಎಂದಿಗಿಂತಲೂ ಇಂದು ಅಗತ್ಯವಾಗಿ ಬೇಕಾಗಿದೆ.
ಮಹೆಬೂಬ ಸುಬಾನಿ ದರ್ಗಾದ ಸಜ್ಜಾದ ಇ ನಸೀನ ಆರೀಫ ಸಾಹೇಬ್ ಖಾದ್ರಿ ಮಾತನಾಡಿ, ನಾವೀಗ 21 ನೇ ಶತಮಾನದ ಕಾಲು ಭಾಗ ಕಳೆದಿದ್ದು, ಭವ್ಯ ಭವಿಷ್ಯ ರೂಪಿಸಿಕೊಳ್ಳಲು ಎಲ್ಲಾ ಧರ್ಮಗಳ ನಡುವೆ ಸೌಹಾರ್ದತೆ ಮೂಡಬೇಕು. ಸಮುದ್ರದಲ್ಲಿ ಸಹಸ್ರಾರು ಅಲೆಗಳು ನಿರಂತರವಾಗಿ ದಡ ಸೇರುತ್ತಲೇ ಇರುತ್ತವೆ. ನಾವು ಕೂಡ ಅಲೆಗಳಂತೆ. ಪರಸ್ಪರ ಒಬ್ಬರ ಭುಜಕ್ಕೆ ಮತ್ತೊಬ್ಬರು ಭುಜ ಕೊಟ್ಟು ಧರ್ಮ ಸಾಗರದಲ್ಲಿ ಸೌಹಾರ್ದತೆಯ ಅಲೆಗಳಾಗಿ ದಡ ಸೆರೋಣ ಎಂದು ಕರೆ ನೀಡಿದರು.
ನಗರ ಸಭೆಯ ಸದಸ್ಯರಾದ ಸಾಬೇರಾ ಬೇಗಂ, ಅನಿತಾ ಸೆಹಗಲ್, ಬಿ. ಕೆ. ಜಯಶ್ರೀ, ಸಂದೀಪ ಚೌಧರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸಿಸ್ಟರ್ ಅನಸ್ತೀಸಿಯಾ, ಸಿಸ್ಟರ್ ಅನುಪಮ, ಸಿಸ್ಟರ್ ಲಿನೇಟ್ ಸಿಕ್ವೇರೀಯಾ, ಪತ್ರಕರ್ತ ಲೋಹಿತ್ ಕಟ್ಟಿ, ಸಿಸ್ಟರ್ ಮರೀಯಾ, ಅಮಲನಾಥ, ಡೊಮಿನಿಕ್, ಆಲಫ್ರೇಡ್ ಇತರರು ಇದ್ದರು.
ಜೋಸೆಫ್ ಮುತ್ತು ಸ್ವಾಗತಿಸಿದರು, ಶ್ರೀಮತಿ ಸುಮಲತಾ ಆರೋಗ್ಯಸ್ವಾಮಿ ನಿರೂಪಿಸಿದರು, ಜೋ ಆನಂದ ವಂದಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಕೇಂದ್ರದ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಧರ್ಮ ಧರ್ಮಗಳ ನಡುವೆ, ಧಾರ್ಮಿಕ ಮುಖಂಡರ ಮಧ್ಯೆ ಪರಸ್ಪರ ಗೌರವ ನೀಡಿ, ಆಲಂಗಿಸಿಕೊಂಡು ಬೆನ್ನು ತಟ್ಟಿದರು. ಸಾಮರಸ್ಯದಲ್ಲಿ ನಿಮಗಿಂತ ನಾವೇ ಒಂದು ಹೆಜ್ಜೆ ಮುಂದೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಕಂಡು ಬಂತು. ಸರ್ವ ಧರ್ಮ ಸ್ನೇಹ ಕೂಟದಲ್ಲಿ ವಿಶ್ವ ಮಾನವ ಸಂದೇಶ ಮೊಳಗಿದಂತೆ ಭಾಸವಾಯಿತು.