ಕಲಬುರಗಿ: ಸರಕಾರಿ ವಿಭಾಗೀಯ ಮುದ್ರಣಾಲಯದಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ವೃತ್ತಿಯಿಂದ ನಿವೃತ್ತಿಗೊಂಡ ಬಸವ ಸೇವಕ ಶಿವಶರಣಪ್ಪ ಕುಸನೂರ ಅವರ ಅಭಿನಂದನಾ ಸಮಾರಂಭವನ್ನು ಆ.11 ರಂದು ಬೆಳಗ್ಗೆ 10.30ಕ್ಕೆ ನಗರದ ಸೇಡಂ ರಸ್ತೆಯಲ್ಲಿರುವ ವೀರಶೈವ ವಿದ್ಯಾರ್ಥಿ ವಸತಿ ನಿಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿಯ ಸಿದ್ಧರಾಮೇಶ್ವರ ಕುಸನೂರ ಹಾಗೂ ಸೌಮ್ಯ ಕುಸನೂರ ಜಂಟಿಯಾಗಿ ತಿಳಿಸಿದ್ದಾರೆ.
ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಸಮಾಜಮುಖಿಯಾದ ವಿವಿಧ ಬಸವಪರ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಶರಣತತ್ವ ಪ್ರಸಾರಕ್ಕಾಗಿ ಮೀಸಲಿಟ್ಟ ಕುಟುಂಬ ಕುಸನೂರ ಪರಿವಾರದ್ದಾಗಿದೆ. ಹಾಗಾಗಿ, ಅಂಥ ಶ್ರೇಷ್ಠ ಚಿಂತಕ ಶಿವಶರಣಪ್ಪ ಕುಸನೂರ ರವರ ಅಭಿನಂದನಾ ಸಮಾರಂಭದಲ್ಲಿ ಪ್ರಸ್ತುತ ಸಮಾಜದ ಚಿಂತನೆಗಳ ಕುರಿತು ವಿಚಾರಗೋಷ್ಠಿ ನಡೆಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಚವದಾಪುರಿ ಹಿರೇಮಠದ ಪೂಜ್ಯ ರಾಜಶೇಖರ ಶಿವಾಚಾರ್ಯರು ಇವರ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ನ್ಯಾ.ಅರಳಿ ನಾಗರಾಜ ಉದ್ಘಾಟಿಸಲಿದ್ದಾರೆ. ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಜಿಪಂ ಸದಸ್ಯ ಶರಣು ಮೆಡಿಕಲ್, ದಕ್ಷಿಣ ಭಾರತ ಔಷಧ ತಜ್ಞರ ಸಂಘದ ಅಧ್ಯಕ್ಷ ಬಿ.ಎಸ್.ದೇಸಾಯಿ, ಹೂಗಾರ ಸಮಾಜದ ರಾಜ್ಯಾಧ್ಯಕ್ಷ ಸೂರ್ಯಕಾಂತ ಫುಲಾರಿ, ಆರೋಗ್ಯ ಇಲಾಖೆಯ ಅಧಿಕಾರಿ ಬಾಬುರಾವ ಪಾಟೀಲ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಈಶ್ವರಿ ಶಿವಶರಣಪ್ಪ ಕುಸನೂರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾಜದ ವಿವಿಧ ರಂಗಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಪ್ರಮುಖರನ್ನು ಸಹ ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.