ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ ಇರುವ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತೀಗ ಸುದ್ದಿಯಲ್ಲಿದೆ ಅದು ಆರ್. ಎಸ್. ಎಸ್. ಪ್ರಣೀತ ಉಪಕುಲಪತಿಯವರ ಪೂರ್ಣ ಬೆಂಬಲದೊಂದಿಗೆ ಅಲ್ಲಿನ ಸಿಬ್ಬಂದಿಗಳು ಅನಾವರಣವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಅವರು ಸಿಯುಕೆಯ ಮೂವರು ಸಿಬ್ಬಂದಿಗಳು ಆರ್. ಎಸ್. ಎಸ್. ಸಂಘದ ಗಣವೇಷಧಾರಿಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ನಿಯಮದ ಪ್ರಕಾರ ನೌಕರರು ಯಾವುದೇ ಸಂಘ ಸಂಸ್ಥೆಗಳಿಗೆ ಸದಸ್ಯರು ಸಹ ಆಗಬಾರದು. ಆದರೆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅತ್ಯಂತ ನಿರ್ಭಯದಿಂದ ಸರಕಾರಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಇದಕ್ಕೆ ಪೂರ್ಣ ಕುಮ್ಮಕ್ಕು ವಿ.ಸಿ. ಆಗಿದ್ದಾರೆ. ಆರ್ ಎಸ್ ಎಸ್ ಬ್ಯಾನ್ ಆದ ಸಂಘಟನೆಯಲ್ಲವಲ್ಲ ಎಂಬುದು ಸ್ವತಃ ವಿಸಿಯ ಉವಾಚವಾಗಿದೆ. ಹಾಗಾದರೆ ಆರ್ ಎಸ್ ಎಸ್ ಶಾಖೆಗಳನ್ನು ತೆರೆದು ನಡೆಸುವಲ್ಲಿ ವಿವಿಯ ಆಡಳಿತವೇ ಆಸಕ್ತಿ ಹೊಂದಿದೆ ಎಂಬ ಹೇಳಿಕೆ ನೀಲಾ ಖಂಡಿಸಿ ವಿಸಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಸಾಂವಿಧಾನಿಕ ಮೌಲ್ಯಕ್ಕನುಸರಿಸಿ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕೆ ಹೊರತು ಮತೀಯ ನೆಲೆಗಟ್ಟಿನ ಚಿಂತನೆಗಳನ್ನಲ್ಲ. ಈ ಹಿಂದೆಯೂ ಈ ಕೇಂದ್ರೀಯ ವಿ.ವಿ.ಯು ಕೋಮು ಚಟುವಟಿಕೆ ನಡೆಸುವುದಕ್ಕಾಗಿಯೇ ವಿರೋಧ ಎದುರಿಸಿತ್ತು. ವಿ.ವಿ.ಯಲ್ಲಿ ಸಂಶೋಧನಾತ್ಮಕ, ಶೈಕ್ಷಣಿಕ ಚಟುವಟಿಕೆ ಕುಸಿದು ಹೋಗುತ್ತಿದ್ದು ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಮೂಲೆಗುಂಪು ಮಾಡುವ ಅಥವ ಅವರನ್ನು ಪೋಲಿಸ್ ಮೂಲಕ ಹಣಿಯುವ ಷಡ್ಯಂತ್ರ ಮಾಡಲಾಗುತ್ತಿದೆ ಆತಂಕ ವ್ಯಕ್ತಪಡಿಸಿದ್ದಾರೆ.
ವಿವಿಯಲ್ಲಿ ಭಾರತೀಯ ಸಂವಿಧಾನ ವನ್ನು ಬದಿಗೊತ್ತಿ ಮನುಸ್ಮೃತಿ ಜಾರಿಗೊಳಿಸುವ ಹುನ್ನಾರಗಳು ಹುರಿಗೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಕೇಂದ್ರೀಯ ವಿಶ‌್ವವಿದ್ಯಾಲಯವೊಂದು ನಮ್ಮ ನಾಡಿನ ಸೌಹಾರ್ದ ಪರಂಪರೆಯನ್ನು ನಾಶ ಮಾಡುವ ಷಡ್ಯಂತ್ರಕ್ಕೆ ಕೈ ಹಾಕಿರುವುದು ಆತಂಕಕಾರಿ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) -ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿಯು ಶೈಕ್ಷಣಿಕ ಕೇಂದ್ರದ ಈ ಕೋಮುವಾದಿ ಕ್ರಮವನ್ನು ತೀವ್ರವಾಗಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಸ್ವಯಂ ಸೇವಕ (ಆರ್.ಎಸ್.ಎಸ್.) ಸಂಘ ಮೂರು ಬಾರಿ ನಿಷೇಧಿಸಲ್ಪಟ್ಟಿರಿವುದನ್ನು ಜನತೆಯು ಮರೆತಿಲ್ಲ. ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಯಾರು? ಆರ್ ಎಸ್ ಎಸ್ ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಮನುಸ್ಮೃತಿಯ ಮೌಲ್ಯ ಸಂವಿಧಾನದಲ್ಲಿ ಇಲ್ಲವೆಂದು ಗೋಳ್ವಾಳ್ಕರ್ ತನ್ನ ಆರ್ಗನೈಜರ್ ಪತ್ರಿಕೆಯಲ್ಲಿ ಬರೆದು ದಾಖಲಿಸಿದೆ. ಸಂವಿಧಾನಸಲ್ಲಿ ನಂಬಿಕೆಯೇ ಇಲ್ಲದ ಇಂತಹ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯದಲ್ಲಿ ಆಸ್ಪದ ಕೊಡಬೇಕೆ? ಪ್ರಜಾಪ್ರಭುತ್ವ ಬಲಪಡಿಸುವ ದಿಕ್ಕಿನಲ್ಲಿ ಸಾಂವಿಧಾನಿಕ ಮೌಲ್ಯದ ಆಧಾರದಲ್ಲಿ ವಿಶ್ವವಿದ್ಯಾಲಯ ಮುನ್ನಡೆಯಬೇಕು. ಆದರೆ ವಿ.ವಿ.ಯ ಉಪಕುಲಪತಿಗಳಿಗೆ ಸಂವಿಧಾನದ ಮೇಲಿನ ನಂಬಿಕೆಗಿಂತಲೂ ಮನುಸ್ಮೃತಿ ಮತ್ತು ಆರ್ ಎಸ್ ಎಸ್ ಮೇಲೆಯೇ ಪೂರ್ಣ ನಂಬಿಕೆ ಇದ್ದಂತೆ ಕಾಣುತ್ತದೆ. ಹಾಗಿದ್ದ ಪಕ್ಷದಲ್ಲಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಅವರು ಆರ್ ಎಸ್ ಎಸ್ ಶಾಖೆ ಸೇರಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸರಕಾರದ ಸಂಬಳ ಪಡೆದು ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಲಿಕ್ಕೆ ಅಧಿಕಾರವಿಲ್ಲ. ವಿಶ್ವವಿದ್ಯಾಲಯ ಇರುವುದು ನಾಡಿನ ಬಹುತ್ವದ ಪ್ರತೀಕವಾಗಿ. ಎಲ್ಲ ಸಮುದಾಯದ ವಿದ್ಯಾರ್ಥಿಗಳು ನಿರ್ಭಯದಿಂದ ವ್ಯಾಸಂಗ ಮಾಡಲು ಸಾಧ್ಯವಾಗಬೇಕು ಅಂತಹ ವಾತಾವರಣ ಸೃಷ್ಟಿಸಬೇಕಾದ ವಿಸಿಯವರೇ ಮತೀಯ ಚಟುವಟಿಕೆ ಕುಮ್ಮಕ್ಕು ಕೊಡುತ್ತಿರುವುದು ಸ್ಪಷ್ಟವಾಗಿದೆ. ಏಕೆಂದರೆ ಸೆಂಟ್ರಲ್ ಸಿವಿಲ್ ಸರ್ವಿಸ್ ರೂಲ್ಸ್ (2966) ಪ್ರಕಾರ ಕೇಂದ್ರ ಸರಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗುವುದಾಗಲಿ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಬಂಧವಿರಿಸಿಕೊಂಡ ಸಂಘ ಸಂಸ್ಥೆಗಳ ಸದಸ್ಯರಾಗುವುದನ್ನು ನಿರ್ಬಂಧಿಸಿದೆ. ಅಲ್ಲದೆ ನಿರ್ದಿಷ್ಟವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜಮಾತ್ ಎ ಇಸ್ಲಾಮಿ ಹಿಂದ್ ನಂತಹ ಸಂಘಟನೆಗಳ ಸದಸ್ಯರಾಗುವುದನ್ನು ಸ್ಪಷ್ಟವಾಗಿ ನಿರ್ಬಂಧಿಸಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ದಂಡನಾರ್ಹ ಕಾನೂನು ಕ್ರಮಕ್ಕೆ ಎಂದು ನಿರ್ದೇಶಿಸಿದೆ.
ಕಾನೂನು ಜಾರಿ ಮಾಡಬೇಕಾಗಿದ್ದುದ್ದು ವಿಸಿಯವರು ಈ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಂಡು ಆರ್ ಎಸ್ ಎಸ್ ಗಣವೇಷಧಾರಿಗಳಾಗಿ ಪರೇಡ್ ಮಾಡುತ್ತಿರುವ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅಲೋಕಕುಮಾರ ಗೌರವ, ಮನಶಾಸ್ತ್ರ ವಿಭಾಗದ ಡಾ.ವಿಜಯೇಂದ್ರ ಪಾಂಡೆ ಮತ್ತು ಜೀವ ವಿಜ್ಞಾನ ವಿಭಾಗದ ಡಾ.ರಾಕೇಶ ಕುಮಾರ ಈ ಮೂವರು ಪ್ರಾಧ್ಯಾಪಕರನ್ನು ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇಂತಹ ಮತೀಯತೆಗೆ ಮತ್ತೆ ಮತ್ತೆ ಆಸ್ಪದ ಕೊಟ್ಟು ವಿವಿಯ ವಾತಾವರಣವನ್ನೇ ಆತಂಕಕ್ಕೆ ದೂಡುತ್ತಿರುವ ವಿಶ್ವವಿದ್ಯಾಲಯದ ಉಪಕುಲಪತಿಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.