ಗುಲ್ಬರ್ಗ ವಿವಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

0
25

ಕಲಬುರಗಿ: ಸಮಾಜದ ಎಲ್ಲ ಸ್ತರಗಳ ಅಧ್ಯಯನವಿದ್ದಾಗ ಮಾತ್ರ ಸಮಾಜಮುಖಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.‌ ನಾಗೇಶ ವಿ. ಬೆಟ್ಟಕೋಟೆ ತಿಳಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸನಾತನ, ಬೌದ್ಧ, ಜೈನ, ವಚನ, ಸಮತಾವಾದ ಹೀಗೆ ಸರ್ವ ಧರ್ಮವನ್ನು ಅರಗಿಸಿಕೊಂಡ ಈ ನೆಲದ ನಾಡು-ನುಡಿಗೆ ಕೊಡುವ ಗೌರವ ಇದಾಗಿದೆ ಎಂದರು.

Contact Your\'s Advertisement; 9902492681

ಇತ್ತೀಚಿಗೆ ಪ್ರಶಸ್ತಿಗಾಗಿ ಇಲ್ಲವೇ ಸಾರ್ವಜನಿಕ ಗ್ರಂಥಾಲಯ ಆಯ್ಕೆಗಾಗಿ ಪುಸ್ತಕ ಪ್ರಕಟಿಸುವ ಇಂದಿನ ದಿನಮಾನಗಳಲ್ಲಿ ನಿಜವಾದ ಸಾಹಿತಿಗಳನ್ನು ಗುರತಿಸಿ ಗೌರವಿಸುವ ಈ ಕೆಲಸ ನಿಜಕ್ಕೂ ಅಭೂತಪೂರ್ವ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.‌ದಯಾನಂದ ಅಗಸರ ಮಾತನಾಡಿ, ಈ ಭಾಗದ ನೆಲಮೂಲ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ಬರಹಗಾರರಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದ್ದು, ಮುಂಬರುವ ದಿನಗಳಲ್ಲಿ ರಾಷ್ಟ್ರ, ರಾಜ್ಯ ಮಟ್ಟದ ವ್ಯಕ್ತಿಯನ್ನು ಗುರುತಿಸುವುದಲ್ಲದೆ ಭಾರತೀಯ ಶೈಕ್ಷಣಿಕ ಪರಂಪರೆಗೆ ಕೊಡುಗೆ ನೀಡಿದ ವ್ತಕ್ತಿಗಳಿಗೆ ವಿದ್ಯಾಮೃತ ಪ್ರಶಸ್ತಿ ನೀಡಲಾಗುವುದು ಎಂದು ಪ್ರಕಟಿಸಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ವಿಠ್ಠರಾವ ಗಾಯಕವಾಡ, ಸಂಗಮನಾಥ ರೇವತಗಾಂವ ಮಾತನಾಡಿದರು. ಕುಲಸಚಿವ ಡಾ. ಬಿ.ಶರಣಪ್ಪ, ವಿತ್ತಾಧಿಕಾರಿ ಪ್ರೊ. ಲಕ್ಷ್ಮಣ ರಾಜನಾಳಕರ, ಸಿಂಡಿಕೇಟ್ ಸದಸ್ಯ ಪ್ರೊ. ಕೆ. ಲಿಂಗಪ್ಪ ವೇದಿಕೆಯಲ್ಲಿದ್ದರು.
ಪ್ರೊ. ಎಚ್.ಟಿ. ಪೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸಂತೋಷ ಮತ್ತು ಡಾ.‌ವಸಂತ ನಿರೂಪಿಸಿದರು.

ಗುಲ್ಬರ್ಗ ವಿವಿ ಪ್ರಸಾರಾಂಗದ ವತಿಯಿಂದ ಕಳೆದ 40 ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ಆಚರಿಸಿಕೊಂಡು ಬರಲಾಗುತ್ತಿದ್ದು, ಬಹುಶಃ ಭಾರತದ ಯಾವ ವಿವಿಯೂ ಈ ರೀತಿಯ ಆಚರಣೆ ಮಾಡುತ್ತಿಲ್ಲ ಎಂದೆನಿಸುತ್ತಿದೆ. -ಪ್ರೊ.‌ಎಚ್.ಟಿ. ಪೋತೆ, ಪ್ರಸಾರಾಂಗ, ಗುವಿಕ

ದಿ.‌ ಜಯತೀರ್ಥ: ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಡಾ. ಜೈನೇಶ ಪ್ರಸಾದ ರೇವಣಪ್ಪ (ಬುದ್ಧಿವಂತ ಮಂತ್ರಿಯ ಕಥೆ- ಚಿನ್ನದ ಪದಕ ), ಶರಣಬಸವ ಕೆ.‌ಗುಡದಿನ್ನಿ (ಪುಲಾರ- ಬೆಳ್ಳಿ ಪದಕ), ಆನಂದ ಎಸ್. ಗೊಬ್ಬಿ (ಜೀವ ಸೆಲೆ-ಕಂಚಿನ ಪದಕ) ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರು: (ಸೃಜನ-ಸೃಜನೇತರ): ಲಕ್ಷ್ಮಿ ಮುದೇನೂರ, ದಾದಾಪೀರ್ ಜೈಮನ್, ಬಸವರಾಜ ಐಗೋಳ, ಬಸವರಾಜ ದಯಾಸಾಗರ, ಡಾ. ವಿಜಯಕುಮಾರ ಜಿ. ಪರೂತೆ, ಡಾ. ಎಂ.ಬಿ.‌ಕಟ್ಟಿ, ಡಾ. ಶ್ರೀಶೈಲ ನಾಗರಾಳ, ಮಂಗಲಾ ಕಪರೆ, ಲಕ್ಷ್ಮೀಕಾಂತ ಪಾಂಚಾಳ.

  • ಜಾನಪದ: ಡಾ. ವೇಷ್ಗಾರು ರಾಮಾಂಜನೇಯ
  • ವಚನ ಸಾಹಿತ್ಯ: ಸಂಗಮನಾಥ ರೇವತಗಾಂವ
  • ಜೀವನ ಕಥನ: ಪ್ರೊ.ವಿ.ಟಿ. ಕಾಂಬಳೆ
  • ಸಮಾಜ ವಿಜ್ಞಾನ: ಡಾ. ಶರಣಪ್ಪ ಸೈದಾಪುರ
  • ವಿಜ್ಞಾನ ಪುಸ್ತಕ (ರಾಜ್ಯ ಮಟ್ಟದ): ಡಾ. ರಾಜಶೇಖರ ಟಿ.‌ಬಸನಾಯಕ.

ಡಾ. ಬಿ.ಅರ್. ಅಂಬೇಡ್ಕರ್ ಪುಸ್ತಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ: ಡಿ.ಎಸ್. ವೀರಯ್ಯ ಸೇರಿದಂತೆ ಅನುವಾದ (ಡಾ. ವಿಠ್ಠಲ ರಾವ ಗಾಯಕವಾಡ), ಇಂಗ್ಲಿಷ್ (ಡಾ.‌ಸುರೇಶ ಜಂಗೆ), ಹಿಂದಿ (ಡಾ. ಅಂಬುಜಾ) , ಪ್ರಕಾಶಕರು (ಅಲ್ಲಮಪ್ರಭು ಪ್ರಕಾಶನ) ಜಾನಪದ ಕಲಾವಿದ (ಶರಣಮ್ಮ ಪಿ. ಸಜ್ಜನ್), ಚಿತ್ರಕಲಾ ಕೃತಿ ಕಾರರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here