ಸುರಪುರ: ಮುಂಬರುವ ಜನೆವರಿ 26ರ ಗಣರಾಜ್ಯೋತ್ಸವದಲ್ಲಿ ಎಲ್ಲಾ ಕಚೇರಿಗಳಲ್ಲಿ ಡಾ:ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವಿಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಒತ್ತಾಯಿಸಲಾಗಿದೆ.
ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿಯವರ ನೇತೃತ್ವದಲ್ಲಿ ನಗರದ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಈ ಹಿಂದೆ ಡಾ:ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಇಡುವುದರ ಕುರಿತು ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನಡೆಸಲಾಗಿದೆ.ಅಲ್ಲದೆ ಸುರಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಇದರ ಕುರಿತು ಗಲಾಟೆಗಳು ನಡೆದಿವೆ.ಈಗ ಮತ್ತೆ ಗಣರಾಜ್ಯೋತ್ಸವ ಬಂದಿದ್ದು ಈಗ ಮತ್ತೆ ಹಿಂದಿನ ನಿರ್ಲಕ್ಷ್ಯ ಮರುಕಳಿಸದೆ ಈಬಾರಿಯ ಗಣರಾಜ್ಯೋತ್ಸವದಲ್ಲಿ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಎಲ್ಲಾ ಕಚೇರಿ ಶಾಲಾ ಕಲೇಜುಗಳಲ್ಲಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಅಲ್ಲದೆ ಹುಣಸಗಿ ತಾಲೂಕಿನ ಚನ್ನೂರ ಗ್ರಾಮದಲ್ಲಿನ ಸರಕಾರಿ ಶಾಲೆಯ ಮುಂಬಾಗದಲ್ಲಿ ಬಿಡಿಸಲಾಗಿರುವ ಡಾ:ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಯಾರೋ ಕಿಡಿಗೇಡಿಗಳು ಅವಮಾನಿಸಿದ್ದಾರೆ,ಅವಮಾನಿಸಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಮಾಡಿ ಕಠಿಣ ಶಿಕ್ಷೆಗೆಗುರಿಪಡಿಸಬೇಕು,ಇದನ್ನು ನಿರ್ಲಕ್ಷಿಸಿದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಡಿವೈಎಸ್ಪಿಯವರಿಗೆ ಬರೆದ ಮನವಿಯನ್ನು ಪಿ.ಐ ಆನಂದ ವಾಘ್ಮೋಡೆ ಅವರಿಗೆ ಮತ್ತು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರವಿಚಂದ್ರ ಬೊಮ್ಮನಹಳ್ಳಿ,ಜಿಲ್ಲಾ ಸಂಚಾಲಕ ಬುದ್ಧಿವಂತ ನಾಗರಾಳ, ರಾಮಣ್ಣ ಶೆಳ್ಳಗಿ,ಸಂಗಪ್ಪ ಚಿಂಚೋಳಿ, ಬಸವರಾಜ ದೊಡ್ಮನಿ,ಮೂರ್ತಿ ಬೊಮ್ಮನಹಳ್ಳಿ,ಜೆಟ್ಟೆಪ್ಪ ನಾಗರಾಳ,ಖಾಜಾಹುಸೇನ ಗುಡಗುಂಟಿ,ಹುಲಗಪ್ಪ ಜಾಂಗೀರ,ಮರಿಲಿಂಗಪ್ಪ ದೇವಿಕೇರಿ,ಯಲ್ಲಪ್ಪ ದೇವಿಕೇರಿ,ಪರಮಣ್ಣ ಕಕ್ಕೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.