-
ನೃಪತುಂಗ ನಾಡಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಐತಿಹಾಸಿಕ ದಾಖಲೆ
-
ಕಂದಾಯ ಗ್ರಾಮಗಳಾದ ತಾಂಡಾಗಳು ಶೀಘ್ರ ಗುಡಿಸಲು ಮುಕ್ತವಾಗಲಿವೆ: ನರೇಂದ್ರ ಮೋದಿ
ಕಲಬುರಗಿ: ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ, ಹಟ್ಟಿ, ಹಾಡಿ ಮುಂತಾದ ಜನವಸತಿ ಪ್ರದೇಶಗಳನ್ನು ಸರ್ಕಾರದ ಯೋಜನೆಗಳಡಿ ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ನಿರ್ಮಿಸಿ, ಇಲ್ಲಿನ ಜನರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್, ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ, ಕಂದಾಯ ಇಲಾಖೆ ವತಿಯಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಗಳ 342 ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ಗ್ರಾಮಗಳ 52,072 ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ನಿಟ್ಟಿನಲ್ಲಿ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲಂಬಾಣಿ ಭಾಷೆಯಲ್ಲಿಯೇ ತಮ್ಮ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿಯವರು, “ಕರ್ನಾಟಕ ತಾಂಡೇರ್ ಮಾರ್ ಗೋರ್ ಬಂಜಾರ ಭಾಯಿ-ಬಿಯಾ, ನಾಯ್ಕ, ಕಾರಬಾರಿ, ಹಾತ್ ಜೋಡೇನ್ ರಾಮ್ ರಾಮ್, ಜೈ ಸೇವಾ ಲಾಲ್ ಮಹಾರಾಜ್” ಎನ್ನುತ್ತಿದ್ದಂತೆಯೇ ಸಮಾರಂಭದಲ್ಲಿ ನೆರೆದಿದ್ದ ಲಂಬಾಣಿ ಸಮುದಾಯ ಚಪ್ಪಾಳೆ ತಟ್ಟಿ ಸಂಭ್ರಮಿಸಿದಲ್ಲದೆ ಮೋದಿ ಮೋದಿ ಎಂದು ಕೂಗಿದರು. ಬಳಿಕ ಕನ್ನಡದಲ್ಲಿ ಮಾತನಾಡಿದ ಪ್ರಧಾನಿಗಳು, ಕಲಬುರಗಿಯ ಶ್ರೀ ಶರಣಬಸವೇಶ್ವರ ಮತ್ತು ಗಾಣಗಾಪೂರದ ಗುರು ದತ್ತಾತ್ರೇಯ ಅವರಿಗೆ ವಂದನೆ, ಪ್ರಖ್ಯಾತ ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಗೆ ಮತ್ತು ಕನ್ನಡ ನಾಡಿನ ಸಮಸ್ತ ಜನರಿಗೆ ನಮಸ್ಕಾರಗಳು ಎಂಬುದಾಗಿ ಹೇಳುತ್ತಿದ್ದಂತೆಯೇ ಜನರ ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತು.
ಜನವರಿ ಮಾಸವು ನಮಗೆಲ್ಲ ಅತ್ಯಂತ ಮಹತ್ವದ್ದಾಗಿದ್ದು, ಇದೇ ತಿಂಗಳಿನಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು. ಇಂತಹ ಪವಿತ್ರ ತಿಂಗಳಿನಲ್ಲಿಯೇ ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ, ಅಲೆಮಾರಿ ಜನಾಂಗದವರಿಗೆ ಹಕ್ಕು ಪತ್ರ ನೀಡುವ ಮೂಲಕ ಬಹುದೊಡ್ಡ ಹೆಜ್ಜೆ ಇರಿಸಿದೆ. ಇದು ಬಂಜಾರ ಸಮುದಾಯದ ಲಕ್ಷಾಂತರ ಜನಕ್ಕೆ ಅತಿದೊಡ್ಡ ದಿನವಾಗಿದ್ದು, ರಾಜ್ಯದ ತಾಂಡಾಗಳಲ್ಲಿನ ಸಾವಿರಾರು ಕುಟುಂಬಗಳ ಉಜ್ವಲ ಭವಿಷ್ಯವನ್ನು ಸುನಿಶ್ಚಿತಗೊಳಿಸಿದೆ. 1993 ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಶಿಫಾರಸ್ಸು ಮಾಡಲಾಗಿತ್ತು.
ಇದನ್ನು ಸಾಕಾರಗೊಳಿಸಲು ನಮ್ಮ ಸರ್ಕಾರವೇ ಬರಬೇಕಾಯಿತು ಎಂದು ಹೇಳಿದ ಅವರು, ಬಂಜಾರ ಸಮುದಾಯದ ಲಕ್ಷಾಂತರ ತಾಯಿ, ತಂದೆಯರು ತಮ್ಮ ಸಾಂಪ್ರಾದಾಯಿಕ ಉಡುಪಿನೊಂದಿಗೆ ಆಗಮಿಸಿ, ನನ್ನನ್ನು ಆಶೀರ್ವದಿಸಿರುವುದನ್ನು ನಾನೆಂದೂ ಮರೆಯುವುದಿಲ್ಲ ಎಂದರು. ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಮಳೆ ಕಡಿಮೆ, ನೀರಿನ ಕೊರತೆ ಇದ್ದರೂ, ಇಂತಹ ಅನೇಕ ಕಡೆ ಅಲ್ಲಲ್ಲಿ ಸಿಗುವ ನೀರಿನ ತಾಣಗಳನ್ನು ಯಾರು ನಿರ್ಮಿಸಿದ್ದಾರೆ ಎಂದು ಪ್ರಶ್ನಿಸಿದರೆ, ಅಲ್ಲಿನ ಜನರಿಂದ ಬರುವ ಉತ್ತರ “ಲಾಖಾ ಬಂಜಾರ” ಎಂದೇ ಆಗಿರುತ್ತದೆ. ಹೀಗೆ ಬಂಜಾರ ಸಮುದಾಯದ ಕಾಣಿಕೆ ಈ ನಾಡಿಗೆ ಬಹುದೊಡ್ಡದು ಎಂದು ಬಣ್ಣಿಸಿದರು.
ರಾಷ್ಟ್ರದ ಪ್ರಗತಿಗೆ ಬಂಜಾರ ಹಾಗೂ ಅಲೆಮಾರಿ ಸಮುದಾಯ ಬಹುದೊಡ್ಡ ಕಾಣಿಕೆಯನ್ನು ನೀಡುತ್ತಾ ಬಂದಿದೆ. ಬಸವಾದಿ ಶರಣರು ಅನುಭವ ಮಂಟಪ ಮೂಲಕ ಬಹು ಹಿಂದೆಯೇ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ್ದರು, ಇದೇ ಸಿದ್ಧಾಂತದೊಂದಿಗೆ ನಾವು ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್ ತತ್ವವನ್ನು ಅನುಸರಿಸುತ್ತಿದ್ದೇವೆ. ಬಂಜಾರ ಸಮುದಾಯ ಬಹಳಷ್ಟು ವರ್ಷ ಖಾಯಂ ನೆಲೆ, ಸೂರು ಇಲ್ಲದೆ ಸಂಕಷ್ಟವನ್ನು ಎದುರಿಸಿದೆ, ತಮ್ಮ ಹಕ್ಕಿಗಾಗಿ ಬಹು ದೀರ್ಘಕಾಲ ಹೋರಾಡಿದ್ದಾರೆ.
ಈಗ ಅವರು ಕೂಡ ಗೌರವ, ಅಭಿಮಾನದಿಂದ ಬದುಕುವ ಕಾಲ ಬಂದಿದೆ. ಬರುವ ದಿನಗಳಲ್ಲಿ ಕಂದಾಯ ಗ್ರಾಮಗಳಾದ ಎಲ್ಲ ತಾಂಡಾ, ಹಾಡಿ, ಹಟ್ಟಿ ಮುಂತಾದ ಪ್ರದೇಶಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪಕ್ಕಾ ಮನೆಗಳನ್ನು ನಿರ್ಮಿಸಿ ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು, ಅಷ್ಟೇ ಅಲ್ಲದೆ, ಇಲ್ಲಿನ ಮನೆಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ, ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಒದಗಿಸಲಾಗುವುದು. ಸಮುದಾಯದ ಯುವ ಪ್ರತಿಭೆಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್, ಕೌಶಲ್ಯ ತರಬೇತಿ, ಉದ್ಯೋಗ ದೊರಕಿಸಲು ಶ್ರಮಿಸಲಾಗುವುದು. ಬಂಜಾರ ಸಮುದಾಯದವರು ಇನ್ನು ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಸಂಕಷ್ಟಗಳನ್ನು ಪರಿಹರಿಸಲು ತಮ್ಮ ಮಗನೊಬ್ಬ ದಿಲ್ಲಿಯಲ್ಲಿ ಕುಳಿತುಕೊಂಡಿದ್ದಾನೆ ಎಂದು ಭಾವನಾತ್ಮಕವಾಗಿ ತಮ್ಮ ಆಶಯ ವ್ಯಕ್ತಪಡಿಸಿದರು.
ತಾಂಡಾಗಳಿಗೆ ಗ್ರಾಮಗಳ ಸ್ಥಾನಮಾನ ನೀಡಿ, ಎಲ್ಲ ಬಗೆಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ತ್ವರಿತವಾಗಿ ಅಭಿವೃದ್ಧಿಪಡಿಸಲಾಗುವುದು. ಸ್ವಾಮಿತ್ವ ಯೋಜನೆ ಮೂಲಕ ಆಸ್ತಿ ದಾಖಲೆಗಳನ್ನು ನೀಡುತ್ತಿದ್ದೇವೆ. ನಮ್ಮ ಡಬಲ್ ಇಂಜಿನ್ ಸರ್ಕಾರದ ಎಲ್ಲ ಯೋಜನೆಗಳ ನೇರ ಲಾಭವನ್ನು ಈ ಗ್ರಾಮಗಳು ಪಡೆಯಲಿವೆ. ಕೇಂದ್ರ ಸರ್ಕಾರ 90 ಕ್ಕೂ ಹೆಚ್ಚು ಬಗೆಯ ವನೋತ್ಪತ್ತಿಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುತ್ತಿದ್ದು, ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ ನಿವಾಸಿಗಳಿಗೂ ಕೂಡ ಈ ಸವಲತ್ತು ಸಿಗಲಿದೆ.
ಎಬಿಎಆರ್‍ಕೆ ಯೋಜನೆ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡುತ್ತಿದ್ದು, ಪಡಿತರ ಸಾಮಗ್ರಿ ವಿತರಣೆಯಲ್ಲಿಯೂ ಹೆಚ್ಚು ಪಾರದರ್ಶಕತೆ ತರಲಾಗಿದೆ. ಬ್ಯಾಂಕ್‍ಗಳ ಬಾಗಿಲನ್ನೂ ನೋಡದ ಸ್ಥಿತಿ ಒಂದಿತ್ತು. ಆದರೆ ಈಗ ಜನಧನ್ ಯೋಜನೆ, ಮುದ್ರಾ ಯೋಜನೆಗಳ ಮೂಲಕ ದೇಶದ 20 ಕೋಟಿಗೂ ಹೆಚ್ಚು ಜನರು ಯಾವುದೇ ಭದ್ರತೆ ಇಲ್ಲದೆ ಸಾಲ ಪಡೆದು, ಹೊಸ ಹೊಸ ಉದ್ಯಮಿಗಳ ಉಗಮವಾಗಿದೆ. ಮೆಡಿಕಲ್, ಇಂಜಿನಿಯರಿಂಗ್, ತಾಂತ್ರಿಕ ಸೇರಿದಂತೆ ಹಲವು ಉನ್ನತ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿಯೇ ವ್ಯಾಸಂಗ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕರ್ನಾಟಕ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಅತಿದೊಡ್ಡ ಕಾರ್ಯಕ್ರಮ ಇದಾಗಿದೆ. ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳ ಜನರ ಜಾಗ ನಿಮ್ಮದಾಗಿರಲಿಲ್ಲ. 50 ವರ್ಷಗಳ ಬೇಡಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆಯಿಂದಾಗಿ ನಾವು ಈಡೇರಿಸಿದ್ದೇವೆ. ಹೀಗಾಗಿ ನರೇಂದ್ರ ಮೋದಿ ಅವರನ್ನು “ಸಾಮಾಜಿಕ ಪರಿವರ್ತಕ” ಎಂದು ಬಣ್ಣಿಸಿದರು. ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಮಾಜಿಕ ಭದ್ರತೆ ಕೊಡುವ ಮೂಲಕ ಇಂತಹ ಶೋಷಿತ ಸಮುದಾಯಕ್ಕೆ ಸಾಮಾಜಿಕ ಪರಿವರ್ತನೆ ಮಾಡುತ್ತಿದ್ದೇವೆ. ಪ್ರಧಾನಮಂತ್ರಿಗಳಿಂದ ಇಂದು ಹಕ್ಕುಪತ್ರ ನೀಡಿದ್ದು, ಈ ಸಮಾಜಕ್ಕೆ ದೊಡ್ಡ ಗೌರವ ಕೊಟ್ಟಂತೆ ಆಗಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದೆ ಎಂದರು.
ಕಂದಾಯ ಸಚಿವರಾದ ಆರ್. ಅಶೋಕ್ ಅವರ ಮೂಲಕ ಕಂದಾಯ ಕ್ರಾಂತಿ ರಾಜ್ಯದಲ್ಲಿ ಆಗುತ್ತಿದೆ. ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿರುವ ಗ್ರಾಮಗಳಲ್ಲಿನ ಜನರಿಗೆ ಈಗ ಹಕ್ಕುಪತ್ರ ನೀಡಲಾಗುತ್ತಿದ್ದು, ಇವರಿಗೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಅವರ ಆಸ್ತಿಯನ್ನು ಉಚಿತವಾಗಿ ನೊಂದಣಿ ಮಾಡಿಸಿ, ಅವರಿಗೆ ದಾಖಲೆ ನೀಡುವಂತೆ ಮಾಡಲಾಗುವುದು ಎಂದರು.
ಒಂದೇ ದಿನ, ಒಂದೇ ವೇದಿಕೆ ಸಮಾರಂಭದಲ್ಲಿ 52,072 ಹಕ್ಕು ಪತ್ರಗಳನ್ನು ಲಂಬಾಣಿ ತಾಂಡಾ ಫಲಾನುಭವಿಗಳಿಗೆ ವಿತರಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದಕ್ಕಾಗಿ, ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್‍ನ ಕರ್ನಾಟಕದ ಉಪಾಧ್ಯಕ್ಷೆ ವಸಂತ ಕವಿತಾ ಅವರು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ರೆಕಾರ್ಡ್‍ನ ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಹೊಸ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ ನಿರಾಣಿ. ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೆಯ ಸಿ. ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಕಲಬುರಗಿ ಸಂಸದ ಡಾ. ಉಮೇಶ ಜಿ. ಜಾಧವ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕರಾದ ಸುಭಾಷ ಆರ್. ಗುತ್ತೆದಾರ, ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ್, ವಿಧಾನ ಪರಿಷತ್ ಶಾಸಕರಾದ ಸುನೀಲ್ ವಲ್ಯಾಪುರೆ, ಶಶೀಲ ಜಿ. ನಮೋಶಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಮ್, ನಿರ್ದೇಶಕ ರಾಜೇಂದ್ರ ಪ್ರಸಾದ್, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿ.ಪಂ ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರೀಮಾ ಪನ್ವಾರ್, ಕೆ.ಕೆ.ಆರ್.ಡಿ.ಬಿ ಉಪ ಕಾರ್ಯದರ್ಶಿ ಆನಂದ್ ಮೀನಾ, ಕೆ.ಕೆ.ಆರ್.ಟಿ.ಸಿ ಎಂ.ಡಿ. ರಾಚಪ್ಪ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.