ಶಹಾಬಾದ: ನಗರದ ವಾಡಿ ಕ್ರಾಸ್‍ದಿಂದ ಮರಗೋಳ ಕಾಲೇಜಿನವರೆಗಿನ ರಸ್ತೆ ನಿರ್ಮಾಣ ತ್ವರಿತ ಗತಿಯಲ್ಲಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಶಹಾಬಾದ ತಾಲೂಕಾ ಹೋರಾಟ ಸಮಿತಿ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ವಾಡಿ ಕ್ರಾಸ್‍ದಿಂದ ಮರಗೋಳ ಕಾಲೇಜಿನವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ.ದಿನನಿತ್ಯ ಇಲ್ಲಿನ ರಸ್ತೆಯಲ್ಲಿ ಸಂಚರಿಸುವವರಿಗೆ ನರಕಯಾತನೆ ಅನುಭವಿಸುತ್ತಿದ್ದಾರೆ.ಸುಮಾರು ನಾಲ್ಕು ವರ್ಷಗಳಾಗುತ್ತ ಬಂದರೂ ರಸ್ತೆ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೋತು ಹೋಗಿದ್ದಾರೆ.ಕೋಟಿಗಟ್ಟಲೇ ಅನುದಾನ ಬಂದಿದ್ದರೂ ಕಳಪೆ ಕಾಮಗಾರಿ ಮಾಡಿದಲ್ಲದೇ ಗುತ್ತಿಗೆದಾರ ಕಾಮಗಾರಿಯೂ ಅರ್ಧಂಬರ್ಧ ಮಾಡಿ ಹೋಗಿದ್ದಾನೆ.ಆದರೂ ಇಲ್ಲಿಯವರೆಗೆ ಗುತ್ತಿಗೆದಾರನ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.ಆದರೆ ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಮಾತ್ರ ಉತ್ತಮ ರಸ್ತೆ ಮಾಡಿಕೊಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಇದೇ ರಸ್ತೆಯಿಂದ ಸಂಚರಿಸುತ್ತಾರೆ.ರಸ್ತೆಯಲ್ಲಿ ಸಂಚರಿಸುವ ಸಮಯದಲ್ಲಿ ದೊಡ್ಡ ತಗ್ಗುಗಳು, ವಿಪರೀತ ಧೂಳಿನಿಂದ ಜನರಿಗೆ ಸಾಕಾಗಿ ಹೋಗಿದೆ.ವಾಹನಗಳು ದುರಸ್ತಿಗೆ ಬರುತ್ತಿವೆ.ಅಪಘಾತಗಳು ಸಂಭವಿಸುತ್ತಿವೆ.ಈಗಾಗಲೇ ಮತ್ತೆ ಪ್ರಾರಂಭವಾದ ಕಾಮಗಾರಿಯನ್ನು ನಿಲ್ಲಿಸಲಾಗಿದೆ.ಅದನ್ನು ಬೇಗನೇ ಕೈಗೊಂಡು ಉತ್ತಮ ರಸ್ತೆ ನಿರ್ಮಾಣ ಮಾಡಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ನಂತರ ಸಂಬಂಧಪಟ್ಟ ಅಧಿಕಾರಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಫೆ.10 ರಿಂದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಹಾಬಾದ ತಾಲೂಕಾ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಮಯೂರ,ಪ್ರಧಾನ ಕಾರ್ಯದರ್ಶಿ ಶೇಖ ಬಾಬು ಉಸ್ಮಾನ, ಖಜಾಂಚಿ ಭೀಮಾಶಂಕರ ಕಾಂಬಳೆ,ರಾಜ ಮಹ್ಮದ್ ರಾಜಾ, ರಾಘವೇಂದ್ರ.ಎಮ್.ಜಿ, ವೆಂಕಟೇಶ ದಂಡಗುಲಕರ್,ಸ್ನೇಹಲ್ ಜಾಯಿ,ಗಣಪತರಾವ ಮಾನೆ,ಜಗನ್ನಾಥ.ಎಸ್.ಹೆಚ್,ನಾಗರಾಜ ರಾಯಚೂರಕರ್,ಮಲ್ಲೇಶಿ ಭಜಂತ್ರಿ ಇತರರು ಇದ್ದರು.