ಶಹಾಬಾದ : ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಯುವಜನತೆ ಸ್ವಯಂ ಸ್ಪೂರ್ತಿಯಿಂದ ಮತದಾನದ ಮಹತ್ವ ಅರಿತುಕೊಂಡು ಅರ್ಹ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ನಗರದ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.
ಅವರು ಸೋಮವಾರ ನಗರದ ಎಸ್.ಎಸ್.ಮರಗೋಳ ಕಾಲೇಜಿನಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ಚಿತ್ತಾಪೂರ ನ್ಯಾಯಾವಾದಿಗಳ ಸಂಘದ ವತಿಯಿಂದ ಆಯೋಜಿಸಲಾದ ಕಾನೂನು ಅರಿವು ನೆರವು ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದಿಗೂ ಕೂಡ ಮತದಾನದ ಜಾಗೃತಿ ಮೂಡಿಸುತ್ತಿರುವದು ವಿμÁಧದ ಸಂಗತಿಯಾಗಿದೆ ಎಂದರು. ಮತದಾನದ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು ಸಾಮಾಜಿಕ ಏಳಿಗೆಗಾಗಿ ಕಡ್ಡಾಯವಾಗಿ ಮತದಾನ ಮಾಡಿ ಯಾವುದೇ ಆಮಿಷುಗಳಿಗೆ ಒಳಗಾಗದೇ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಲ್ಲಿ ಮತದಾರರು ಸಾಕ್ಷರತೆ ಹಾಗೂ ಜಾಗೃತರಾಗಿರುವದು ಅತೀ ಮುಖ್ಯವಾಗಿದೆ. ಚುನಾವಣಾ ಆಯೋಗವು 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಪ್ರಯತ್ನ ನಡೆಸಿದೆ.ಆದ್ದರಿಂದ ಮತದಾನದ ಸದಾವಕಾಶವನ್ನು ಬಳಸಿಕೊಂಡು ಮತದಾನ ಮಾಡಬೇಕೆಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಶಿಂಧೆ ಹಾಗೂ ಉಪನ್ಯಾಸಕರಾಗಿ ರವೀಂದ್ರ ಕಟ್ಟಿಮನಿ ಮಾತನಾಡಿ, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಇಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಮತದಾನದ ಮೂಲಭೂತ ಹಕ್ಕಿನಿಂದ ಯಾರೂ ವಂಚಿತರಾಗಬಾರದು ಎನ್ನುವುದು ಭಾರತ ಚುನಾವಣಾ ಆಯೋಗದ ಮೂಲ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಅರ್ಹತೆ ದಿನದಂದು 18 ವರ್ಷ ಪೂರ್ಣಗೊಳಿಸಿದ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅವಕಾಶ ನೀಡಿದೆ. ಯುವಕರು ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಪ್ರಕ್ರಿಯೆಯಲ್ಲಿ ಪಾಲಗೊಳ್ಳಲು ಮುಂದಾಗುವಂತೆ ತಿಳಿಸಿದರು.
ಪ್ರಾಂಶುಪಾಲ ಕೆ.ಬಿ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಡಿ.ಸಿ.ಕುಲಕುಂದಿಕರ್ ಹಾಗೂ ಪ್ರಾಧ್ಯಾಪಕ ಡಾ.ವೇಂಕಟೇಶ, ಎಮ್.ಕೆ.ಬೋತಗಿ ಇತರರು ಇದ್ದರು.
ಶಿವಶಂಕರ ಹಿರೇಮಠ ನಿರೂಪಿಸಿದರು, ಡಾ.ವೆಂಕಟೇಶ ಪೂಜಾರಿ ಸ್ವಾಗತಿಸಿದರು, ಸಿ.ಬಿ.ಗಂದಿಗುಡಿ ವಂದಿಸಿದರು.