ಕಲಬುರಗಿ: ಆಳಂದ ವಿಧಾನಸಭಾ ಕ್ಷೆತ್ರದಲ್ಲಿ ತಮ್ಮ ಅನುಯಯಿಗಳ ಹೆಸರುಗಳನ್ನು ಶಾಸಕ ಸುಭಾಷ ಗುತ್ತೇದಾರ ಅವರು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂಬ ಬಿ.ಅರ್. ಪಾಟೀಲ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ತಿಳಿಸಿದರು.
ತಾಲ್ಲೂಕಿನಲ್ಲಿ 6673ಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಮಾಡಿಸುವ ತಂತ್ರ ನಡೆದಿದ್ದು, ಇದರ ಹಿಂದೆ ಶಾಸಕ ಸುಭಾಷ ಗುತ್ತೇದಾರ ಅವರ ನಿಚ್ಚಳ ಪಾತ್ರವಿದೆ ಎಂದು ಬಿ.ಅರ್. ಪಟೀಲ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ವಾಸ್ತವದಲ್ಲಿ ಸ್ವತಃ ಬಿ.ಆರ್. ಪಾಟೀಲರ ಆಪ್ತರಾದ ಶರಣಬಸಪ್ಪ ವಾಗೆ ಮತ್ತು ರಾಹುಲ್ ಪಾಟೀಲ ಕೆರೂರ ಅವರು ಕೊಲ್ಕತ್ತಾ ಮೂಲದ ಏಜೆನ್ಸಿಯೊಂದಕ್ಕೆ ಇಂತಹ ಅಕ್ರಮ ಎಸಗಲು ಗುತ್ತಿಗೆ ಕೊಟ್ಟಿದ್ದು, ಆ ಸಂಸ್ಥೆಯ ಮೂಲಕ ಸುಭಾಷ ಗುತ್ತೇದಾರ ಅವರ ಬೆಂಬಲಿಗರ ಹೆಸರು ಡಿಲೀಟ್ ಮಾಡಿಸುವ ಕುತಂತ್ರವನ್ನು ಬಹಳ ದಿನಗಳಿಂದ ಮಾಡುತ್ತ ಬಂದಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಮಾಜಿ ಶಾಸಕ ಬಿ.ಆರ್. ಪಾಟೀಲ ಮಾಡಿರುವ ಆರೋಪವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಅವರದ್ದೇ ಶಾಲೆಯಿಂದ ಮೊದಲು ತನಿಖೆ ಆರಂಭಿಸಬೇಕು. ಆಗ ಸತ್ಯ ಏನು ಎಂಬುದು ಹೊರ ಬೀಳಲಿದೆ. ಹಾಗಾಗಿ ತಾವು ಸಹ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಹರ್ಷಾನಂದ ಗುತ್ತೇದಾರ ಆನಂದರಾವ ಪಾಟೀಲ, ಮಲ್ಲಿಕಾರ್ಜುನ ಕಂದಗೂಳೆ, ಹಣಮಂತರಾವ ಮಲಾಜಿ, ಸಂತೋಷ ಹಾದಿಮನಿ, ಚಂದ್ರಕಾಂತ ಘೋಡ್ಕೆ ಇತರರಿದ್ದರು.
ಇತ್ತೀಚೆಗೆ ಆಳಂದ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಗೆ ಹೆಚ್ಚು ಜನರು ಬಂದಿರಲಿಲ್ಲ. ಇದರಿಂದ ಪಾಟೀಲರು ಹತಾಶೆರಾಗಿದ್ದು, ಈಗಲೇ ಚುನಾವಣೆ ಫಲಿತಾಂಶ ತಮ್ಮ ವಿರುದ್ಧ ಬರಬಹುದು ಎಂಬ ಭೀತಿಯಲ್ಲಿ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಜನರ ಸಿಂಪಥಿ ಗಳಿಸಲು ಈ ಆರೋಪ ಮಾಡುತ್ತಿದ್ದಾರೆ ಎಂದು ಹರ್ಷಾನಂದ ಗುತ್ತೇದಾರ ದೂರಿದರು.