ಕಲಬುರಗಿ: ಕಳೆದ ಆರು ದಶಕಗಳಿಂದಲೂ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರಂತರ ಅನ್ಯಾಯವಾಗುತ್ತಿದೆ.ಇದನ್ನು ಸರಿಪಡಿಸಲು ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯಾದರೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡಿಸಬೇಕು.60 ಸಾವಿರ ಕೋಟಿ ಹಣ ಮೀಸಲಿಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚಿಸಿದರೂ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಂಡಿಲ್ಲ.ಕಲ್ಯಾಣ ಕರ್ನಾಟಕ ಪ್ರದೇಶ ಭೌಗೋಳಿಕವಾಗಿ ದೊಡ್ಡದಾಗಿ.ಇಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಆದರೆ ಅನೇಕ ರಂಗಗಳಲ್ಲಿ ಪ್ರಗತಿ ಕಾಣದೆ ಇನ್ನು ಹಿಂದುಳಿದಿದೆ.
ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಭಾಗ ಅಭಿವೃದ್ಧಿಯಾಗುವುದಿಲ್ಲ. ಕಲ್ಯಾಣವಾಗಬೇಕಾದರೆ ಪ್ರತ್ಯೇಕ ಬಜೆಟ್ ಮಂಡಿಸಲೇಬೇಕು.ಹೊಸ ಕೃಷಿ ನೀತಿ ಜಾರಿಗೆ ತರಬೇಕು. ರೈತರಿಗೆ ಬೆಳೆ ನಷ್ಟದ ಪರಿಹಾರ ವಿತರಿಸಬೇಕು. ನೀರಾವರಿ ಯೋಜನೆಗಳು, ರಸ್ತೆಗಳು, ಕೈಗಾರಿಕೆಗಳ ಸ್ಥಾಪನೆ, ರೈತರಿಗೆ ವಿಶೇಷ ಆರ್ಥಿಕ ನೆರವು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು.ಈ ಭಾಗದ ಯುವಜನತೆಗೆ ಆಧುನಿಕ ಕೌಶಲ್ಯ ಕಲಿಯಲು ಕೌಶಲ್ಯ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು.
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಹಣ ಮೀಸಲಿಡಬೇಕು.ಕಲಬುರಗಿ,ಬೀದರ, ಯಾದಗಿರಿ ಹಾಗೂ ರಾಯಚೂರ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವುದು ಮತ್ತು ಉತ್ತಮ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಹಣ ನೀಡಬೇಕು.ಕಲಬುರಗಿಯಲ್ಲಿರುವ ತೊಗರಿ ಮಂಡಳಿಗೆ 500 ಕೋಟಿ ಹಣ ಬಿಡುಗಡೆ ಮಾಡಬೇಕು.ಕಲಬುರಗಿಯಲ್ಲಿ ತೊಗರಿ ಪಾರ್ಕ್ ನಿರ್ಮಿಸಬೇಕು,ಈ ಬಾರಿ ಬಜೆಟ್ ನಲ್ಲಿ ಕೆ.ಕೆ.ಆರ್.ಡಿ.ಬಿಗೆ ವಾರ್ಷಿಕ 10 ಸಾವಿರ ಕೋಟಿ ಕೊಡಬೇಕು.ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಬೇಕು.ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
ಸಂವಿಧಾನದ 371ನೇ ಜೆ ಕಲಂ ಅನ್ವಯ ನೇಮಕಾತಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.371ನೇ ಜೆ ಕಲಂ ತಿದ್ದುಪಡಿ ನಂತರ ನ್ಯಾಯಯುತವಾಗಿ ಸ್ಥಳಿಯರಿಗೆ ಸಿಗಬೇಕಾದ ಉದ್ಯೋಗಗಳು ಗೊಂದಲದಿಂದ ಈ ಭಾಗದ ಜನರು ವಂಚಿತರಾಗುತ್ತಿದ್ದು ಇದನ್ನು ಕೂಡಲೇ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.