ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಸಾಂಸ್ಕೃತಿಕ ಗತವೈಭವ ಸಾರುವ “ಕಲ್ಯಾಣ ಕರ್ನಾಟಕ ಉತ್ಸವದ” ಭವ್ಯ ಮೆರವಣಿಗೆ ಫೆಬ್ರವರಿ 24 ರಂದು ಬೆಳಿಗ್ಗೆ 8 ಗಂಟೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದಲೇ ಆರಂಭಿಸಲು ಸೋಮವಾರ ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಉತ್ಸವಗಳ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಉತ್ಸವ ಅಂಗವಾಗಿ ನಡೆಯುತ್ತಿರುವ ಪೂರ್ವಸಿದ್ಧತೆ ಕುರಿತು ಪರಾಮರ್ಶಿಸಿ ಆಯಾ ಸಮಿತಿಗಳಿಂದ ಮಾಹಿತಿ ಪಡೆದ ಅವರು, ಫೆ.24 ರಂದು ಬೆಳಿಗ್ಗೆ ಮಂಡಳಿಯಿಂದ ಪ್ರಾರಂಭವಾಗುವ ಮೆರವಣಿಗೆ ಏಶಿಯನ್ ಮಾಲ್, ಎಸ್.ಪಿ. ಕಚೇರಿ, ಜಿಲ್ಲಾ ಆಸ್ಪತ್ರೆ, ಖರ್ಗೆ ಪೆಟ್ರೋಲ್ ಪಂಪ್, ಹೊಸ ಆರ್.ಟಿ.ಓ. ಕಚೇರಿ, ಕುಸನೂರ ರಸ್ತೆ ಮಾರ್ಗವಾಗಿ ಗುಲಬರ್ಗಾ ವಿ.ವಿ. ಆವರಣ ತಲುಪಲಿದೆ. ಮೆರವಣಿಗೆಯುದ್ದಕ್ಕೂ ಮೆರವಣಿಗೆಗೆ ರಂಗು ನೀಡುವಂತೆ ವಿವಿಧ ಕಲಾ ಪ್ರಕಾರದ ಕಲಾ ತಂಡಗಳ ಪ್ರದರ್ಶನ ಆಯೋಜಿಸಬೇಕು ಎಂದು ಅನಿರುದ್ಧ ಶ್ರವಣ ಪಿ. ಅಧಿಕಾರಿಗಳಿಗೆ ತಿಳಿಸಿದರು.
ಮೆರವಣಿಗೆ ವೇದಿಕೆ ಸ್ಥಳ ತಲುಪುತ್ತಿದ್ದಂತೆ ಜಿಲ್ಲೆಯ ಜನಪ್ರತಿನಿಧಿಗಳಿಂದ ಪುಸ್ತಕ ಪ್ರದರ್ಶನ, ಫಲಪುಶ್ಪ ಪ್ರದರ್ಶನ, ವಸ್ತು ಪ್ರದರ್ಶನ ಸೇರಿದಂತೆ ಮೊದಲ ದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿವಿಧ ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಸೂಚನೆ ನಿಡಿದರು.
ಫೆಬ್ರವರಿ 25 ರಂದು ಸಾಹಸ ಕ್ರೀಡೆ, ಜಲ ಕ್ರೀಡೆ, ಹೆಲಿ ರೈಡ್, ಮಕ್ಕಳ ಹಬ್ಬ, ಗಾಳಿಪಟ ಉತ್ಸವ ಮತ್ತು ಮೂರನೇ ದಿನದಂದು ಮಹಿಳಾ ಉತ್ಸವ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಮುಖ್ಯಮಂತ್ರಿಗಳು, ಸಚಿವರನ್ನು ಆಹ್ವಾನಿಸಲಾಗಿದೆ. ಉತ್ಸವದ ಪೂರ್ವಭಾವಿಯಾಗಿ ಫೆಬ್ರವರಿ 19 ರಿಂದ ಗುಲಬರ್ಗಾ ವಿ.ವಿ. ಆವರಣದಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆ ಶಿಬಿರ ಆಯೋಜಿಸಿದ್ದು, ಇಲ್ಲಿ ಮೂಡಿ ಬಂದ ಕಲೆಗಳ ಪ್ರದರ್ಶನ ಉತ್ಸವದಲ್ಲಿ ಕಾಣಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಮಂಡಳಿ ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಕೆ.ಕೆ.ಆರ್.ಡಿ.ಸಿ. ಎಂ.ಡಿ. ಎಂ.ರಾಚಪ್ಪ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಂಡಳಿಯ ಜಂಟಿ ಕಾರ್ಯದರ್ಶಿ ಪ್ರವೀಣ ಪ್ರಿಯಾ ಸೇರಿದಂತೆ ವಿವಿದ ಉತ್ಸವ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು, ಅಧಿಕಾರಿಗಳು ಇದ್ದರು.